ರಾಮಮಂದಿರ ನಿರ್ಮಾಣಕ್ಕೆ ಪಿಎಫ್‌ಐ ದೇಣಿಗೆ ಬೇಕಾಗಿಲ್ಲ: ಶೋಭಾ ಕರಂದ್ಲಾಜೆ

ಕಾಪು, ಫೆ.20: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಿ ಎಂದು ಪಿಎಫ್ಐ ಸಂಘಟನೆಯ ಬಳಿ ಯಾರೂ ಹೋಗಿಲ್ಲ. ಮಂದಿರ ನಿರ್ಮಾಣಕ್ಕೆ ನಮಗೆ ಪಿಎಫ್‌ಐ ದೇಣಿಗೆಯೂ ಬೇಕಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಾಪುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ಪಿಎಫ್‌ಐ ರಾಷ್ಟ್ರವಿರೋಧಿ ಸಂಘಟನೆ. ಸಂಘ ಪರಿವಾರದ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆಗೆ ರಾಮಮಂದಿರದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದವರು ವಾಗ್ದಾಳಿ ನಡೆಸಿದರು.
ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಎರಡೂ ಸರಕಾರಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಪಿಎಫ್ಐ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಗೃಹ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. ಶೀಘ್ರವೇ ಸಂಘಟನೆ ನಿಷೇಧವಾಗುವ ವಿಶ್ವಾಸವಿದೆ ಎಂದವರು ನುಡಿದರು.
ಕೇರಳದಲ್ಲಿ ದಂಡ ಹಾಗೂ ಆಯುಧಗಳೊಂದಿಗೆ ಮೆರವಣಿಗೆ ನಡೆಸಲು ಪಿಎಫ್ಐಗೆ ಅನುಮತಿ ನೀಡಿರುವುದು ಮುಸಲ್ಮಾನರ ಓಲೈಕೆಗೆ ಎಂದ ಅವರು, ಸರಕಾರದ ಅನುಮತಿಯೊಂದಿಗೆ ಇದು ನಡೆಯುತ್ತಿದೆ. ಪಿಎಫ್‌ಐ ರಾಷ್ಟ್ರವಿರೋಧಿ ಸಂಘಟನೆ ಎಂದು ಕೇರಳ ಸರಕಾರಕ್ಕೆ ತಿಳಿದಿದೆ. ತಿಳಿದಿದ್ದರೂ ಮುಸ್ಲಿಮರ ಓಟು ಪಡೆಯಲು ಪಿಎಫ್‌ಐಗೆ ಅನುಮತಿ ನೀಡಿದೆ ಎಂದು ಆರೋಪಿಸಿದರು.
ಅಪರಾಧಿಗಳಿಗೆ ಮೆರವಣಿಗೆಗೆ ಅನುಮತಿ ನೀಡಿರುವುದು ದೇಶ ವಿರೋಧಿ ಚಟುವಟಿಕೆ. ಕೇರಳ ಸರಕಾರದ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಶೋಭಾ ಕರಂದ್ಲಾಜೆ ನುಡಿದರು.







