ನ್ಯಾಯ ವ್ಯವಸ್ಥೆಯಲ್ಲಿ ಜಿಲ್ಲಾ ನ್ಯಾಯಾಲಯ ಮುಖ್ಯ ಘಟ್ಟ: ಹೈಕೋರ್ಟ್ ಮುಖ್ಯ ನಾಯಮೂರ್ತಿ ಎ.ಎಸ್. ಓಕಾ

ಮಂಗಳೂರು: ನ್ಯಾಯಾಲಯಗಳಲ್ಲಿ ಮೇಲು–ಕೀಳು ಇಲ್ಲ. ಆಯಾ ಭೌಗೋಳಿಕ, ಕಾನೂನು, ಆಡಳಿತಾತ್ಮಕ ಮತ್ತಿತರ ವ್ಯಾಪ್ತಿಯನ್ನು ಹೊಂದಿರುತ್ತವೆ. ಅದಕ್ಕಾಗಿ ನಾನು ವಿಚಾರಣಾ ಅಥವಾ ಜಿಲ್ಲಾ ನ್ಯಾಯಾಲಯ ಎಂದು ಉಲ್ಲೇಖಿಸುತ್ತೇನೆ ಎಂದು ಹೈಕೋರ್ಟ್ ಮುಖ್ಯ ನಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹೇಳಿದರು.
ಮಂಗಳೂರು ವಕೀಲರ ಸಂಘದಲ್ಲಿ ಶನಿವಾರದಲ್ಲಿ ಶನಿವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಕಾನೂನು ವಿಚಾರಗಳನ್ನು ಹೆಚ್ಚಾಗಿ ಜಿಲ್ಲಾ ನ್ಯಾಯಾಲಯದಲ್ಲೇ ಕಲಿತ್ತಿದ್ದೇನೆ. ಹೀಗಾಗಿ, ನನಗೆ ಇದೊಂದು ಮನೆಯ ಅನುಭವ ನೀಡುತ್ತದೆ. ಜಿಲ್ಲಾ ನ್ಯಾಯಾಲಯವು ಬಹಳ ಮುಖ್ಯ ಘಟ್ಟವಾಗಿದೆ. ಸ್ಥಳೀಯ ಪ್ರಾಮುಖ್ಯತೆ ಹೊಂದಿದ ಹೆಚ್ಚಿನ ವಿಚಾರಗಳು ಜಿಲ್ಲಾ ನ್ಯಾಯಾಲಯಕ್ಕೆ ಬರುತ್ತವೆ. ಶೇ 60ರಷ್ಟು ಮಾತ್ರ ಮುಂದಿನ ಹಂತಕ್ಕೆ ಹೋಗುತ್ತವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಹೈಕೋರ್ಟ್ ಕೆಲವು ಉತ್ತಮ ಹೆಜ್ಜೆಗಳನ್ನು ಇಡಲು ಹೈಕೋರ್ಟ್ ಜೊತೆಗೆ ಜಿಲ್ಲಾ ನ್ಯಾಯಾಲಯ ಹಾಗೂ ವಕೀಲರು ನೀಡುತ್ತಿದ್ದ ಸಲಹೆ, ಸೂಚನೆಗಳೂ ಕಾರಣ ಎಂದರು.
ಸೋಮವಾರದಿಂದ ಕೋರ್ಟ್ ಕಲಾಪಗಳು ಯಥಾಸ್ಥಿತಿಗೆ ಬರಲಿದ್ದು, ಮಾಸ್ಕ್ ಧಾರಣೆ, ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಮತ್ತಿತರ ನಿಯಮ ಪಾಲಿಸಬೇಕು. ಕೇವಲ ವಕೀಲರು ಮಾತ್ರವಲ್ಲ, ಕಕ್ಷಿದಾರರಿಗೂ ತಿಳಿಸಿ. ಅನಗತ್ಯವಾಗಿ ಯಾವುದೇ ಕಕ್ಷಿದಾರರು ಬಾರದಂತೆ ಕ್ರಮವಹಿಸಿ ಎಂದು ಸಲಹೆ ನೀಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮಾತನಾಡಿ, ನನಗೂ ಮಂಗಳೂರು ನ್ಯಾಯಾಲಯಕ್ಕೂ ಅವಿನಾಭಾವ ಸಂಬಂಧವಿದೆ. ನನ್ನ ತಂದೆ ನ್ಯಾಯಾಧೀಶರಾಗಿದ್ದು, ಆಗ ಇಲ್ಲಿನ ಹಿರಿಯ ವಕೀಲರ ಜೊತೆ ವಿಚಾರ ವಿನಿಮಯ, ಚರ್ಚೆಗಳ ಬಗ್ಗೆ ಅವರು ಉಲ್ಲೇಖಿಸುತ್ತಿದ್ದರು. ಅಲ್ಲದೇ, ಇಲ್ಲಿನ ಹಲವಾರು ವಕೀಲರು ನ್ಯಾಯಾಂಗ, ರಾಜಕೀಯ, ಆಡಳಿತದಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ. ಪಿ.ಎಸ್. ದಿನೇಶ್‌ಕುಮಾರ್ ನೂತನ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಬಳಿಕ ಜಿಲ್ಲೆಯ ನ್ಯಾಯಾಧೀಶರ ಜೊತೆ ಸಂವಾದ ನಡೆಸಿದರು.
ವೆಬ್‌ಸೈಟ್‌ನಲ್ಲೇ ಆದೇಶ ಪ್ರತಿ: ಜಿಲ್ಲಾ ನ್ಯಾಯಾಲಯದಲ್ಲೂ ಆದೇಶದ ಪ್ರತಿಗಳು ಸಮಗ್ರವಾಗಿ ವೆಬ್‌ಸೈಟ್‌ನಲ್ಲಿ ಸಿಗುವಂತೆ ಮಾಡಲು ಕ್ರಮ ವಹಿಸಲಾಗುವುದು. ಇದಕ್ಕಾಗಿ ಕೆಲವು ತಿದ್ದುಪಡಿಗಳ ಅಗತ್ಯವಿದೆ. ಈ ನಿಟ್ಟಿನ ಪ್ರಯತ್ನ ನಡೆಸುತ್ತಿದೆ’ ಎಂದು ಹೈಕೋರ್ಟ್ ಮುಖ್ಯ ನಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹೇಳಿದರು.









