ನನ್ನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿಯ ಸಂಚು: ಪಮೇಲಾ ಗೋಸ್ವಾಮಿ ಆರೋಪ
ವಿಜಯವರ್ಗೀಯ ಅವರ ಆಪ್ತ ರಾಕೇಶ್ ಸಿಂಗ್ ನನ್ನು ಬಂಧಿಸುವಂತೆ ಆಗ್ರಹ

ಕೋಲ್ಕತಾ: ಕೊಕೇನ್ ಸಾಗಾಟದ ಆರೋಪದಲ್ಲಿ ಶುಕ್ರವಾರ ಕೋಲ್ಕತಾ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಬಂಗಾಳ ಬಿಜೆಪಿಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಲು ಕಾರಿನಿಂದ ಇಳಿದ ತಕ್ಷಣವೇ ಸುದ್ದಿಗಾರರೊಂದಿಗೆ ಏರು ಧ್ವನಿಯಲ್ಲಿ ಮಾತನಾಡುತ್ತಾ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಆಪ್ತ ರಾಕೇಶ್ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಆತ ನನ್ನ ವಿರುದ್ಧ ಷಡ್ಯಂತ್ರ ರಚಿಸಿದ್ದಾನೆಂದು ಆರೋಪಿಸಿದ್ದಾರೆ. ಈ ಪ್ರಕರಣದ ಕುರಿತು ಸಿಐಡಿ ತನಿಖೆಯಾಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಶೀಘ್ರವೇ ಚುನಾವಣೆ ನಡೆಯಲಿರುವ ಪಶ್ಚಿಮಬಂಗಾಳದಲ್ಲಿ ವಿಜಯವರ್ಗೀಯ ಬಿಜೆಪಿಯ ರಾಜ್ಯ ಉಸ್ತುವಾರಿಯಾಗಿದ್ದಾರೆ.
“ನಾನು ಈ ಪ್ರಕರಣದ ಸಿಐಡಿ ತನಿಖೆಯಾಗಲಿ ಎಂದು ಬಯಸುವೆ. ಕೈಲಾಶ್ ವಿಜಯವರ್ಗೀಯ ಅವರ ಆಪ್ತ ಬಿಜೆಪಿಯ ರಾಕೇಶ್ ಸಿಂಗ್ ನನ್ನು ಬಂಧಿಸಬೇಕು. ಇದು ಆತನ ಪಿತೂರಿಯಾಗಿದೆ’’ ಎಂದು ಪಮೇಲಾ ಆರೋಪಿಸಿದರು. ಆದರೆ ಪಮೇಲಾ ಅವರು ಈ ಆರೋಪವನ್ನು ನ್ಯಾಯಾಲಯದಲ್ಲಿ ಪುನರಾವರ್ತಿಸಲಿಲ್ಲ.





