ಕನಿಷ್ಠ ಬೆಂಬಲ ಬೆಲೆ ವಿಷಯದಲ್ಲಿ ಹಸಿ ಸುಳ್ಳು ಹೇಳುತ್ತಿರುವ ಪ್ರಧಾನಿ ಮೋದಿ: ರೈತ ಸಂಘದ ಟೀಕೆ

ಹೊಸದಿಲ್ಲಿ, ಫೆ.20: ಕೃಷಿ ಕಾಯ್ದೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿ ಸುಳ್ಳುಗಳ ಮೂಲಕ ದೇಶದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಶುಕ್ರವಾರ ಹೇಳಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ, ದೇಶದಲ್ಲಿ ಉನ್ನತ ಅಧಿಕಾರ ಹೊಂದಿರುವ ವ್ಯಕ್ತಿ ಹಸಿ ಸುಳ್ಳು ಹೇಳುತ್ತಾ ದೇಶದ ಜನರ ದಾರಿ ತಪ್ಪಿಸಿ ರೈತರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಎಐಕೆಎಸ್‌ನ ಮುಖಂಡ ಹನ್ನಾನ್ ಮೊಲ್ಲಾ ಹೇಳಿದ್ದಾರೆ.
ಫೆಬ್ರವರಿ 8ರಂದು ರಾಜ್ಯಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಕನಿಷ್ಟ ಬೆಂಬಲ ಬೆಲೆ ಪದ್ಧತಿ ರದ್ದಾಗುವುದಿಲ್ಲ. ಕನಿಷ್ಟ ಬೆಂಬಲ ಬೆಲೆ ಇತ್ತು, ಈಗಲೂ ಇದೆ ಮತ್ತು ಮುಂದೆಯೂ ಇರಲಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಉಲ್ಲೇಖಿಸಿದ ಹನ್ನಾನ್, ವಾಸ್ತವದಲ್ಲಿ ಪ್ರಧಾನಿ ಸತ್ಯವನ್ನು ಮರೆಮಾಚಿ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ಸ್ವಾಮಿನಾಥನ್ ವರದಿಯ ಶಿಫಾರಸ್ಸುಗಳನ್ನು ಸರಕಾರ ಅನುಷ್ಟಾನಗೊಳಿಸುತ್ತದೆ ಎಂದು ಈ ಹಿಂದೆ ಭರವಸೆ ನೀಡಿದ್ದರೂ, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವ ಪ್ರಯತ್ನವನ್ನೂ ನಡೆಸಿಲ್ಲ ಎಂದು ಆರೋಪಿಸಿದರು. ಈಗ ರೂಪಿಸಿರುವ ಕನಿಷ್ಟ ಬೆಂಬಲ ಬೆಲೆ ಪ್ರತಿಫಲದಾಯಕವಾಗಿಲ್ಲ ಮತ್ತು ಕೇವಲ 6% ರೈತರಿಗೆ ಮಾತ್ರ ಒದಗಿಸಲಾಗಿದೆ.
ಇದರಲ್ಲಿ ಉತ್ಪಾದನಾ ವೆಚ್ಚದಲ್ಲಿ ಎಲ್ಲಾ ವೆಚ್ಚವನ್ನೂ ಸೇರಿಸಿಲ್ಲ. ಆದರೆ ಸ್ವಾಮಿನಾಥನ್ ಆಯೋಗವು ಎಲ್ಲಾ ಉತ್ಪಾದನಾ ವೆಚ್ಚ ಹಾಗೂ 50% ಹೆಚ್ಚುವರಿ ಮೊತ್ತವನ್ನು ಕನಿಷ್ಟ ಬೆಂಬಲ ಬೆಲೆಯಾಗಿ ಒದಗಿಸುವಂತೆ ಶಿಫಾರಸು ಮಾಡಿದೆ. ಈಗ ರೈತರಿಗೆ ನೀಡಲಾಗುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸುವ ಮೊತ್ತಕ್ಕಿಂತ 20% ಕಡಿಮೆ ಮೊತ್ತ ರೈತರಿಗೆ ದೊರಕುತ್ತಿದೆ. ಅಲ್ಲದೆ ಕೇವಲ 60% ರೈತರು, ಕೇವಲ ಎರಡು ಬೆಳೆಗಳಿಗೆ ಮಾತ್ರ ಕನಿಷ್ಟ ಬೆಂಬಲ ಬೆಲೆಯ ಪ್ರಯೋಜನ ಪಡೆಯುತ್ತಿದ್ದಾರೆ. ಈಗಿರುವ ಮಾರುಕಟ್ಟೆ ವ್ಯವಸ್ಥೆಯಲ್ಲಿ ಎಲ್ಲಾ ರೈತರಿಗೂ ಮಾರುಕಟ್ಟೆಯವರು ರೂಪಿಸಿದ ಕನಿಷ್ಟ ಬೆಂಬಲ ಬೆಲೆಯ ಪ್ರಕಾರ, 23 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ದೊರಕುತ್ತಿದೆ ಎಂದವರು ಹೇಳಿದ್ದಾರೆ.







