ಜಮ್ಮುಕಾಶ್ಮೀರ: ಇಬ್ಬರು ಶಂಕಿತ ಉಗ್ರರ ಬಂಧನ

ಕೋಲ್ಕೊತಾ, ಫೆ. 20: ಜಮ್ಮು ಹಾಗೂ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆ ಶುಕ್ರವಾರ ಲಷ್ಕರೆ ತಯ್ಯಿಬದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ ಪಾಪಚಾನ್- ಬಂಡಿಪೋರಾ ಸೇತುವೆಯ ಸಮೀಪ ಇರುವ ಪರಿಶೀಲನಾ ಕೇಂದ್ರದಲ್ಲಿ ತಪಾಸಣೆಗೆ ನಿಂತಿತ್ತು ಹಾಗೂ ನಿಷೇಧಿತ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಶಂಕಿತ ಭಯೋತ್ಪಾದಕರನ್ನು ಅಬಿದ್ ವಾಝಾ ಹಾಗೂ ಬಷೀರ್ ಅಹ್ಮದ್ ಗೋಜೆರ್ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಉತ್ತರ ಕಾಶ್ಮೀರದ ಬಂಡಿಪೋರಾದ ನಿವಾಸಿಗಳು.
ಈ ಪ್ರದೇಶದಲ್ಲಿ ಭಯೋತ್ಪಾದಕರಿಗೆ ಆಶ್ರಯ, ಅವರ ಸಾಮಗ್ರಿಗಳ ಸಾಗಾಟ ಹಾಗೂ ಇತರ ಬೆಂಬಲಗಳನ್ನು ಇವರು ನೀಡಿದ್ದಾರೆ ಎಂಬುದನ್ನು ಪೊಲೀಸರ ದಾಖಲೆ ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.
Next Story





