ಮಂಗಳನಿಂದ ಅಮೋಘ ಚಿತ್ರಗಳನ್ನು ಕಳುಹಿಸಿದ ‘ಪರ್ಸೀವರೆನ್ಸ್’

ಫೋಟೊ ಕೃಪೆ: twitter.com/CNES
ವಾಶಿಂಗ್ಟನ್, ಫೆ. 20: ಅಮೆರಿಕದ ಶೋಧಕ ನೌಕೆ ‘ಪರ್ಸೀವರೆನ್ಸ್’ ಕಳುಹಿಸಿದ ಮಂಗಳ ಗ್ರಹದ ಅಮೋಘ ಚಿತ್ರಗಳನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಶುಕ್ರವಾರ ಬಿಡುಗಡೆ ಮಾಡಿದೆ.
ಕಳೆದ ವರ್ಷದ ಜುಲೈ 30ರಂದು ಭೂಮಿಯಿಂದ ಹಾರಿದ ‘ಪರ್ಸವರನ್ಸ್’ ಗುರುವಾರ ಮಂಗಳ ಗ್ರಹದ ಅಂಗಳದ ಮೇಲೆ ಯಶಸ್ವಿಯಾಗಿ ಇಳಿದಿತ್ತು.
ನಾಸಾ ಬಿಡುಗಡೆ ಮಾಡಿದ ಚಿತ್ರಗಳ್ಲಲಿ, ಶೋಧಕ ನೌಕೆಯು ಮಂಗಳನ ಮೇಲೆ ಇಳಿಯುತ್ತಿರುವ ಚಿತ್ರವೂ ಇದೆ. ಈ ಚಿತ್ರಗಳನ್ನು ಶೋಧಕ ನೌಕೆಯನ್ನು ಹೊತ್ತಿದ್ದ ಬಾಹ್ಯಾಕಾಶ ನೌಕೆ (ಆರ್ಬಿಟರ್) ತೆಗೆದಿದೆ.
‘‘ಶೋಧಕ ನೌಕೆಯ ಯಂತ್ರಗಳು ಎಬ್ಬಿಸಿದ ಧೂಳನ್ನು ಚಿತ್ರದಲ್ಲಿ ನೋಡಬಹುದಾಗಿದೆ’’ ಎಂದು ‘ಪರ್ಸೀವರೆನ್ಸ್’ ನ ಮುಖ್ಯ ಇಂಜಿನಿಯರ್ ಆ್ಯಡಮ್ ಸ್ಟೆಲ್ನರ್ ಹೇಳಿದ್ದಾರೆ. ಈ ಚಿತ್ರವನ್ನು ಮಂಗಳನ ನೆಲದಿಂದ ಸುಮಾರು 2 ಮೀಟರ್ ಮೇಲಿನಿಂದ ತೆಗೆಯಲಾಗಿದೆ ಎಂಬುದಾಗಿ ಅವರು ಅಂದಾಜಿಸಿದ್ದಾರೆ.
ಶೋಧಕವು ‘ಜಝೆರೊ ಕ್ರೇಟರ್’ನಲ್ಲಿ ಇಳಿದಿದ್ದು, ಅಲ್ಲಿನ ಸಮತಟ್ಟು ಪ್ರದೇಶವನ್ನು ತೋರಿಸುವ ಚಿತ್ರವೊಂದನ್ನೂ ಕಳುಹಿಸಿದೆ. ಜಝೆರೊ ಕ್ರೇಟರ್ನಲ್ಲಿ ನೂರಾರು ಕೋಟಿ ವರ್ಷಗಳ ಹಿಂದೆ ಒಂದು ನದಿ ಮತ್ತು ಒಂದು ಆಳ ಸರೋವರ ಅಸ್ತಿತ್ವದಲ್ಲಿದ್ದವು ಎಂದು ಹೇಳಲಾಗಿದೆ.
ಇನ್ನೊಂದು ಚಿತ್ರವು ಜೇನುಗೂಡಿನ ಕೋಶಗಳಂಥ ರಚನೆಯನ್ನು ಹೊಂದಿರುವ ಕಲ್ಲುಗಳನ್ನು ತೋರಿಸುತ್ತದೆ. ಈ ಕಲ್ಲುಗಳು 360 ಕೋಟಿ ವರ್ಷಗಳಿಗಿಂತಲೂ ಹೆಚ್ಚು ಹಳೆಯವು ಎನ್ನಲಾಗಿದೆ.







