ತೈಲ ಬೆಲೆಯೇರಿಕೆ ಕಿರಿಕಿರಿಯ ವಿಷಯ, ದರ ಇಳಿಕೆ ಹೊರತು ಬೇರೆ ಉತ್ತರವಿಲ್ಲ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಫೆ.20: ತೈಲ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿರುವುದು ಕಿರಿಕಿರಿಯ ವಿಷಯವಾಗಿದ್ದು ಇದಕ್ಕೆ ದರ ಇಳಿಕೆ ಹೊರತು ಬೇರೆ ಉತ್ತರವಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ವಾಸ್ತವಾಂಶ ತಿಳಿಸಲು ನಾನೇನು ಹೇಳಿದರೂ, ನಾನು ಉತ್ತರಿಸುವುದರಿಂದ ನುಣುಚಿಕೊಳ್ಳುತ್ತಿದ್ದೇನೆ ಅಥವಾ ಬೇರೆಯವರ ಮೇಲೆ ಆಪಾದನೆ ಹೊರಿಸುತ್ತಿದ್ದೇನೆ ಎಂದು ಭಾವಿಸಬಹುದು. ತೈಲ ಬೆಲೆಯೇರಿಕೆ ವಿಷಯಕ್ಕೆ ದರ ಇಳಿಕೆ ಹೊರತು ಅನ್ಯ ಉತ್ತರವಿಲ್ಲ ಎಂದು ವಿತ್ತಸಚಿವೆ ಹೇಳಿದರು. ತೈಲ ಬೆಲೆಯನ್ನು ನ್ಯಾಯಸಮ್ಮತ ದರಕ್ಕೆ ಇಳಿಸುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾರ್ಗೋಪಾಯ ಹುಡುಕಬೇಕಿದೆ. ತೈಲ ಬೆಲೆಯನ್ನು ಮುಕ್ತಗೊಳಿಸಲಾಗಿದ್ದು ಕೇಂದ್ರ ಸರಕಾರಕ್ಕೆ ಇದರ ಮೇಲೆ ನಿಯಂತ್ರಣವಿಲ್ಲ.
ತೈಲ ಮಾರಾಟ ಸಂಸ್ಥೆಗಳು ತೈಲ ದರವನ್ನು ನಿಗದಿಗೊಳಿಸುತ್ತವೆ. ಕಚ್ಚಾತೈಲದ ಆಮದು ವೆಚ್ಚ , ಅದರ ಸಂಸ್ಕರಣೆ ವೆಚ್ಚ, ಸಾಗಣೆ, ಪೂರೈಕೆ ವೆಚ್ಚ ಇದನ್ನೆಲ್ಲ ಲೆಕ್ಕಹಾಕಿ ತೈಲ ದರ ಏರಿಸಬೇಕೇ ಅಥವಾ ಇಳಿಸಬೇಕೇ ಎಂಬುದನ್ನು ತೈಲ ಮಾರಾಟ ಸಂಸ್ಥೆಗಳು ನಿರ್ಧರಿಸುತ್ತವೆ . ನವೆಂಬರ್‌ನಿಂದ ಬ್ರೆಂಟ್ ದರ(ಬೆಂಚ್‌ಮಾರ್ಕ್ ದರ) ನಿರಂತರ ಏರಿಕೆಯಾಗಿರುವುದು ಮತ್ತು ತೈಲ ಉತ್ಪಾದನೆ ಮತ್ತು ರಫ್ತು ಮಾಡುವ ರಾಷ್ಟ್ರಗಳು ಉತ್ಪಾದನೆ ಮೊಟಕುಗೊಳಿಸಿರುವುದು ತೈಲ ಬೆಲೆಯೇರಿಕೆಗೆ ಕಾರಣವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದಾಗಿ ವರದಿ ತಿಳಿಸಿದೆ. ತೈಲ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಎಸ್‌ಟಿ ಸಮಿತಿಯೊಂದಿಗೆ ವಿವರವಾದ ಚರ್ಚೆ ನಡೆಸಿದ ಬಳಿಕ ಈ ಬಗ್ಗೆ ನಿರ್ಧರಿಸಬಹುದಾಗಿದೆ ಎಂದರು.







