ಮಣಿಪುರ: ಕೋವಿಡ್ ಲಸಿಕೆ ಪಡೆದ ವಾರಗಳ ಬಳಿಕ ಅಂಗನವಾಡಿ ಕಾರ್ಯಕರ್ತೆ ಸಾವು

ಇಂಫಾಲ, ಫೆ. 20: ಕೋವಿಡ್-19 ಲಸಿಕೆ ಸ್ವೀಕರಿಸಿದ ಬಳಿಕ ಮಣಿಪುರದ 48 ವರ್ಷದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬಿಷ್ಣುಪುರ ಜಿಲ್ಲೆಯ ಕುಂಬಿ ತೆರಾಖಾ ಪ್ರದೇಶದ ಸುಂದರಿ ದೇವಿ ಅವರು ಫೆಬ್ರವರಿ 12ರಂದು ಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ ಅವರನ್ನು ಫೆಬ್ರವರಿ 18ರಂದು ಮೊರ್ಯಾಂಗ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಅವರು ಅಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಸಾವಿನ ನಿಜವಾದ ಕಾರಣ ತಿಳಿಯಲು ವಿಶೇಷ ತಂಡ ಮರಣೋತ್ತರ ಪರೀಕ್ಷೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಮಣಿಪುರದ ಮುಖ್ಯಮಂತ್ರಿ ಎನ್. ಬೈರೇನ್ ಸಿಂಗ್ ಮೃತಪಟ್ಟ ಸುಂದರಿ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದಾರೆ ಹಾಗೂ ಅವರ ಸಂಕಷ್ಟವನ್ನು ಆಲಿಸಿದ್ದಾರೆ. ಸುಂದರಿ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಅವರು, ಮರಣೋತ್ತರ ಪರೀಕ್ಷೆಯ ವರದಿ ಪರಿಗಣಿಸಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.





