ರಜನಿಕಾಂತ್ ಅವರನ್ನು ಭೇಟಿಯಾದ ಕಮಲ್ ಹಾಸನ್

ಚೆನ್ನೈ, ಫೆ. 20: ನಟ ಹಾಗೂ ಮಕ್ಕಳ್ ನೀಧಿ ಮೈಯಂ ಪಕ್ಷದ ಸ್ಥಾಪಕ-ವರಿಷ್ಠ ಕಮಲ್ ಹಾಸನ್ ಶನಿವಾರ ನಟ ಹಾಗೂ ರಾಜಕಾರಣಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ. ರಜನಿಕಾಂತ್ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಪ್ರಕಟಿಸಿದ ಕೆಲವು ವಾರಗಳ ಬಳಿಕ ಮೊದಲ ಬಾರಿಗೆ ಕಮಲ್ ಹಾಸನ್ ಅವರು ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.
2021ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಮಕ್ಕಳ್ ನಿಧಿ ಮೈಯಂ ಪಕ್ಷ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ಕಮಲ್ ಹಾಸನ್ ಅವರು ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ. ಆದರೆ, ಅವರಿಬ್ಬರೂ ರಾಜಕೀಯದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ. ಐದು ವರ್ಷಗಳ ವದಂತಿಯ ಬಳಿಕ ಕಳೆದ ವರ್ಷ ಡಿಸೆಂಬರ್‌ನಲ್ಲಿ ರಜನಿಕಾಂತ್ ಅವರು ರಾಜಕೀಯ ಪಕ್ಷ ಆರಂಭಿಸಿದ್ದರು. ಆದರೆ, ಅನಂತರ ಆರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯ ಪ್ರವೇಶಿಸಲಾರೆ ಎಂದು ಹೇಳಿದ್ದರು. ಇನ್ನೊಂದೆಡೆ ಕಮಲ್ ಹಾಸನ್ ಅವರು 2018ರಲ್ಲಿ ರಾಜಕೀಯ ಪಕ್ಷ ಆರಂಭಿಸಿದ್ದರು. ಅಲ್ಲದೆ, ಇತ್ತೀಚೆಗೆ ರಜನಿಕಾಂತ್ ಅವರ ಬೆಂಬಲ ಕೋರಿದ್ದರು.





