ದ.ಕ.: ಜಿಪಂ-ತಾಪಂ ಕ್ಷೇತ್ರ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

ಮಂಗಳೂರು, ಫೆ.21: ದ.ಕ.ಜಿಲ್ಲೆಯ ಜಿಪಂ ಮತ್ತು ತಾಪಂಗಳ ಚುನಾಯಿತ ಸದಸ್ಯರ ಅವಧಿಯು ಮುಕ್ತಾಯದ ಹಂತದಲ್ಲಿದೆ. ಹಾಗಾಗಿ ಜಿಲ್ಲಾಡಳಿತವು ಹೊಸ ಚುನಾವಣೆಗೆ ಸಿದ್ಧತೆ ನಡೆಸಿವೆ. ಈ ಮಧ್ಯೆ ರಾಜಕೀಯ ಪಕ್ಷಗಳೂ ಕೂಡ ತೆರೆಮರೆಯಲ್ಲಿ ಚಟುವಟಿಕೆ ಆರಂಭಿಸಿದೆ. ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಸಂಬಂಧಪಟ್ಟ ಜನಸಂಖ್ಯೆ, ಗ್ರಾಮಗಳ ವಿವರಗಳನ್ನು ಕಳುಹಿಸುವಂತೆ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.
ಜಿಪಂ, ತಾಪಂಗಳ ಅಧಿಕಾರದ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆಯಬೇಕು. ಒಂದು ವೇಳೆ ಚುನಾವಣೆ ವಿಳಂಭವಾದರೆ ಅವಧಿ ಮುಕ್ತಾಯದ ಬಳಿಕ ಸರಕಾರದಿಂದ ಆಡಳಿತಾಧಿಕಾರಿಗಳ ನೇಮಕವಾಗುತ್ತದೆ.
ರಾಜ್ಯದಲ್ಲಿ 2016ರ ಫೆಬ್ರವರಿಯಲ್ಲಿ ಜಿಪಂ ಹಾಗೂ ತಾಪಂಗಳಿಗೆ ಚುನಾವಣೆ ನಡೆದಿತ್ತು. ಅಂದರೆ ದ.ಕ. ಜಿಲ್ಲೆಯಲ್ಲಿ ೆ.20ರಂದು ಚುನಾವಣೆ ನಡೆದಿದ್ದು,ಫೆ.23ರಂದು ಮತಎಣಿಕೆ ಆಗಿತ್ತು. ಜಿಪಂ ಹಾಗೂ ತಾಪಂ ಚುನಾಯಿತ ಅವಧಿ 5 ವರ್ಷಗಳಾದರೂ ಕೂಡ ನಿಯಮಗಳ ಪ್ರಕಾರ ಚುನಾವಣೆ ಬಳಿಕ ನೂತನವಾಗಿ ಆಯ್ಕೆಗೊಂಡಿರುವ ಸದಸ್ಯರ ಪ್ರಥಮ ಸಭೆಯ ನಡೆದ ದಿನಾಂಕದಿಂದ ಮುಂದಿನ 5 ವರ್ಷಗಳವರೆಗೆ ಅಧಿಕಾರಾವಧಿ ಇರುತ್ತದೆ.
ಜಿಪಂ: ಎ.27ಕ್ಕೆ ಮುಕ್ತಾಯ
ದ.ಕ. ಜಿಪಂನ ಹಾಲಿ ಚುನಾಯಿತ 36ರ ಸದಸ್ಯರ ಅಧಿಕಾರಾವಧಿ ಎ.27ಕ್ಕೆ ಕೊನೆಗೊಳ್ಳಲಿದೆ. 2016ರ ಎ.28ರಂದು ಜಿಪಂ ಚುನಾಯಿತ ಸದಸ್ಯರ ಪ್ರಥಮ ಸಭೆ ನಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. *ಏಳು ತಾಪಂ
ದ.ಕ.ಜಿಲ್ಲೆಯಲ್ಲಿ 2016ರ ಚುನಾವಣೆಯ ಸಂದರ್ಭ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸಹಿತ 5 ತಾಪಂಗಳಿದ್ದವು. ಆ ಬಳಿಕ ಹೊಸದಾಗಿ ಮೂಡುಬಿದಿರೆ ಹಾಗೂ ಕಡಬ ತಾಲೂಕುಗಳ ರಚನೆಯಾದ ಹಿನ್ನಲೆಯಲ್ಲಿ ಮೂಡುಬಿದಿರೆ ಹಾಗೂ ಕಡಬ ತಾಪಂಗಳು ಅಸ್ತಿತ್ವಕ್ಕೆ ಬಂದಿದೆ. ಇದೀಗ ಮೂಲ್ಕಿ ಮತ್ತು ಉಳ್ಳಾಲ ತಾಲೂಕು ಘೋಷಣೆಯಾಗಿದ್ದು, ಅಧಿಕೃತ ಚಾಲನೆ ಸಿಗಲು ಬಾಕಿ ಇವೆ.
ಸ್ಧಾನಗಳ ಸಂಖ್ಯೆ ಇಳಿಕೆ
ಮಂಗಳೂರು ತಾಪಂ 2016ರ ಚುನಾವಣೆ ಸಂದರ್ಭ 39 ಸದಸ್ಯರನ್ನು ಹೊಂದಿತ್ತು. ಸೋಮೇಶ್ವರ ಗ್ರಾಪಂ ಪುರಸಭೆ ಆಗಿ ರೂಪುಗೊಂಡಿರುವ ಹಿನ್ನಲೆಯಲ್ಲಿ ಎರಡು ಸ್ಥಾನಗಳು ಕಡಿಮೆಯಾಗಿ ತಾಪಂನ ಸದಸ್ಯರ ಬಲ 37ಕ್ಕೆ ಇಳಿದಿತ್ತು. ಬಳಿಕ ಮಂಗಳೂರು ತಾಲೂಕು ವಿಭಜನೆಯಾಗಿ ಮೂಡುಬಿದಿರೆ ತಾಲೂಕು ರೂಪುಗೊಂಡ ಕಾರಣ ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಬರುವ 8 ತಾಪಂ ಕ್ಷೇತ್ರಗಳು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮೂಡುಬಿದಿರೆ ತಾಪಂ ಅಧೀನಕ್ಕೆ ಬಂದಿದೆ. ಹಾಗಾಗಿ ಮಂಗಳೂರು ತಾಪಂನ ಒಟ್ಟು ಸದಸ್ಯಬಲ 29ಕ್ಕೆ ಇಳಿದಿತ್ತು. ಇದೀಗ ಹೊಸದಾಗಿ ಬಜ್ಪೆ ಹಾಗೂ ಮಳವೂರು ಗ್ರಾಪಂ ಸೇರಿ ಬಜ್ಪೆ ಪಟ್ಟಣ ಪಂಚಾಯತ್ ಹಾಗೂ ಕಿನ್ನಿಗೋಳಿ, ಮೆನ್ನಬೆಟ್ಟು ಹಾಗೂ ಕೊಂಡೆಮೂಲ ಗ್ರಾಪಂಗಳು ಸೇರಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿರುವ ಹಿನ್ನಲೆಯಲ್ಲಿ ಸದಸ್ಯಬಲ ಇನ್ನಷ್ಟು ಇಳಿಕೆಯಾಗಲಿದೆ. ಅಲ್ಲದೆ ಕೋಟೆಕಾರ್ ಪಟ್ಟಣ ಪಂಚಾಯತ್ ಆಗಿರುವ ಹಿನ್ನಲೆಯಲ್ಲಿ ಮತ್ತೆ ಎರಡು ಸ್ಥಾನ ಇಳಿಕೆಯಾಗಲಿದೆ. ಅಂದರೆ ಇದೀಗ ಮಂಗಳೂರು ತಾಪಂನಲ್ಲಿ 21 ಸ್ಥಾನ ಇರಲಿದೆ. ಭವಿಷ್ಯದಲ್ಲಿ ಮುಲ್ಕಿ ಮತ್ತು ಉಳ್ಳಾಲ ತಾಲೂಕು ರಚನೆಯಾದಾಗ ಈ ಸ್ಥಾನದಲ್ಲಿ ಮತ್ತಷ್ಟು ಇಳಕೆಯಾಗಲಿದೆ. ಮಂಗಳೂರು ಮತ್ತು ಮೂಡುಬಿದಿರೆಯಲ್ಲಿ ಒಟ್ಟು ಜಿಪಂ ಸದಸ್ಯರ ಬಲ 10 ಇತ್ತು. ಇದೀಗ ಪ್ರತ್ಯೇಕಗೊಂಡರೂ ಕೂಡ 1 ಸ್ಥಾನ ಏರಿಕೆಯಾಗಿದೆ.ಅಂದರೆ ಮಂಗಳೂರು ತಾಲೂಕಿನಲ್ಲಿ 8 ಮತ್ತು ಮೂಡುಬಿದಿರೆ ತಾಲೂಕಿನಲ್ಲಿ 3 ಜಿಪಂ ಕ್ಷೇತ್ರಗಳಿರಲಿದೆ.
2016ರಲ್ಲಿ 24 ಸದಸ್ಯಬಲವನ್ನು ಹೊಂದಿದ್ದ ಪುತ್ತೂರು ತಾಪಂನ 11 ಸ್ಥಾನಗಳು ಹೊಸದಾಗಿ ರಚನೆಯಾಗಿರುವ ಕಡಬ ತಾಪಂ ಆಗಿರುವ ಕಾರಣ ಪ್ರಸ್ತುತ ಸದಸ್ಯಬಲ 13ಕ್ಕೆ ಇಳಿದಿದೆ. ಸುಳ್ಯ ತಾಪಂನ 11 ಸದಸ್ಯ ಬಲದಲ್ಲಿ 2 ಸ್ಥಾನಗಳು ಕಡಬ ತಾಪಂಗೆ ಹೋಗಿರುವ ಹಿನ್ನಲೆಯಲ್ಲಿ 9ಕ್ಕೆ ಇಳಿದಿದೆ.
ಒಟ್ಟು 13 ಸದಸ್ಯಬಲದೊಂದಿಗೆ ಹೊಸದಾಗಿ ಕಡಬ ತಾಪಂ ರಚನೆಯಾಗಿತ್ತು. ಆದರೆ ಇದೀಗ ಕಡಬ ಪಟ್ಟಣ ಪಂಚಾಯತ್ ರಚನೆಯಾಗಿರುವುದರಿಂದ 1 ಸ್ಥಾನ ಕಡಿಮೆಯಾಗಿದ್ದು, ಒಟ್ಟು ಸದಸ್ಯಬಲ 12ಕ್ಕಿಳಿದಿದೆ.
ಜಿಪಂ ಅಥವಾ ತಾಪಂ ಕ್ಷೇತ್ರ ವಿಂಗಡನೆಗೆ ಜನಸಂಖ್ಯೆಯೇ ಆಧಾರವಾಗಿರುತ್ತದೆ. 1 ತಾಪಂ ಕ್ಷೇತ್ರವು 2 ಜಿಪಂ ಕ್ಷೇತ್ರದಲ್ಲಿ ಹಂಚಿಕೆಯಾಗದಂತೆ ಚುನಾವಣಾ ಆಯೋಗ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಡಳಿತ ಎಚ್ಚರಿಕೆಯಿಂದ ಸಮೀಕ್ಷೆ ನಡೆಸಿದೆ.
ಈ ಮಧ್ಯೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಪಕ್ಷಗಳು ಸಿದ್ದತೆಗಳನ್ನು ನಡೆಸಿವೆ. ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ ರಾಜಕೀಯ ಸಮಾವೇಶಗಳನ್ನು ಆಯೋಜಿಸುವ ಮೂಲಕ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕಾರ್ಯ ಆರಂಭಿಸಿದೆ.
*ಅಧಿಕಾರಾವಧಿಯ ಮುಕ್ತಾಯ
ತಾಪಂ ಅವಧಿ ಮುಕ್ತಾಯ
ಸುಳ್ಯ ಮೇ 5
ಮಂಗಳೂರು ಮೇ 7
ಮೂಡುಬಿದಿರೆ ಮೇ 7
ಪುತ್ತೂರು ಮೇ 7
ಕಡಬ ಮೇ 7
ಬಂಟ್ವಾಳ ಮೇ 10
ಬೆಳ್ತಂಗಡಿ ಮೇ 10







