ಬಲೂಚಿಸ್ತಾನ: ಪ್ರತ್ಯೇಕ ದಾಳಿಗಳಲ್ಲಿ ಐವರು ಪಾಕ್ ಸೈನಿಕರ ಹತ್ಯೆ

ಸಾಂದರ್ಭಿಕ ಚಿತ್ರ
ಕರಾಚಿ,ಫೆ.20: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ರವಿವಾರ ಶಂಕಿತ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿಗಳಲ್ಲಿ ಕನಿಷ್ಠ ಐವರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಹಾಗೂ ಇತರ ಇಬ್ಬರು ಗಾಯಗೊಂಡಿದ್ದಾರೆ
ದೂರನಿಯಂತ್ರಿತ ಉಪಕರಣಗಳನ್ನು ಬಳಸಿ ಬಾಂಬ್ಗಳನ್ನು ಸ್ಫೋಟಿಸಲಾಗಿದೆ. ಕ್ವೆಟ್ಟಾ ನಗರ ಹಾಗೂ ಕೊಹ್ಲು ಜಿಲ್ಲೆ ದುರ್ಗಮ ಪ್ರದೇಶವೊಂದರಲ್ಲಿ ಗುರುವಾರ ಪಾಕಿಸ್ತಾನದ ಗಡಿಮುಂಚೂಣಿಯ ಯೋಧರನ್ನು (ಫ್ರಂಟಿಯರ್ ಕಾರ್ಪ್ಸ್) ಗುರಿಯಿರಿಸಿ ಈ ದಾಳಿಗಳನ್ನು ನಡೆಸಲಾಗಿದೆೆ.
ಮೊದಲನೆಯ ದಾಳಿಯು ಕ್ವೆಟ್ಟಾ ನಗರದ ಹೊರವಲಯದಲ್ಲಿರುವ ಬೈಪಾಸ್ ಪ್ರದೇಶದಲ್ಲಿ ನಡೆದಿದೆ. ಮೋಟಾರ್ ಸೈಕಲೊಂದರಲ್ಲಿ ದೂರನಿಯಂತ್ರಿತ ಬಾಂಬ್ ಒಂದನ್ನು ಇರಿಸಲಾಗಿದ್ದು, ಸೇನಾವಾಹನಗಳು ಸಾಲು ಆಗಮಿಸುತ್ತಿದ್ದಾಗ ಅವುಗಳನ್ನು ಸ್ಪೋಟಿಸಲಾಗಿದೆ. ಘಟನೆಯಲ್ಲಿ ಓರ್ವ ಸೈನಿಕ ಸಾವನ್ನಪ್ಪಿದ್ದು ಇತರ ಇಬ್ಬರು ಗಾಯಗೊಂಡಿದ್ದಾರೆಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಬಾಂಬ್ ದಾಳಿ ಕೊಹ್ಲು ಜಿಲ್ಲೆಯ ಕಹಾನ್ ಪ್ರದೇಶದಲ್ಲಿ ನಡೆದಿದೆ. ಭಯೋತ್ಪಾದಕರು ಶನಿವಾರ ತಡರಾತ್ರಿ ಗಡಿಮುಂಚೂಣಿ ಪಡೆಗಳ ತಪಾಸಣಾ ಠಾಣೆಯ ಮೇಲೆ ದಾಳಿ ನಡೆಸಿದ್ದು, ನಾಲ್ವರು ಪಾಕ್ ಯೋಧರು ಸಾವಿಗೀಡಾಗಿದ್ದಾರೆ.
ಶಸ್ತ್ರಧಾರಿ ವ್ಯಕ್ತಿಗಳು ತಪಾಸಣಾ ಠಾಣೆಯ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, ಆಗ ಸೈನಿಕರು ಕೂಡಾ ಪ್ರತಿದಾಳಿ ನಡೆಸಿದ್ದಾರೆಂದು ಪಾಕ್ ಸೇನಾ ಮೂಲಗಳು ವರದಿ ಮಾಡಿವೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ನ ಕೇಂದ್ರ ಸ್ಥಳವಾದ ಬಲೂಚಿಸ್ತಾನದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಂಡುಕೋರರು ಭದ್ರತಾ ಪಡೆಗಳ ಮೇಲೆ ತಮ್ಮ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
ಫೆಬ್ರವರಿ 15ರಂದು ಬಲೂಚಿಸ್ತಾನದ ದುರ್ಗಮ ಕುಚ್ ಪ್ರದೇಶದಲ್ಲಿ ಗಡಿಮುಂಚೂಣಿ ತಪಾಸಣಾ ಠಾಣೆಯ ಮೇಲೆ ಇದೇ ರೀತಿಯಾಗಿ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ಸೈನಿಕ ಸಾವನ್ನಪ್ಪಿದ್ದು, ಇತರರು ಗಾಯಗೊಂಡಿದ್ದರು.





