ಸೋಮವಾರದಿಂದ 6ನೇ ತರಗತಿಯಿಂದ ಪೂರ್ಣಪ್ರಮಾಣದ ಶಾಲೆ ಆರಂಭ

ಬೆಂಗಳೂರು, ಫೆ. 21: ರಾಜ್ಯದಲ್ಲಿ ಬೆಂಗಳೂರು ನಗರ, ಕೇರಳ ಗಡಿಭಾಗ ಹೊರತುಪಡಿಸಿ ನಾಳೆ(ಫೆ.22)ಯಿಂದ ರಾಜ್ಯಾದ್ಯಂತ 6ನೇ ತರಗತಿಯಿಂದ ಪೂರ್ಣಪ್ರಮಾಣದ ಶಾಲೆಗಳು ಪ್ರರಂಭವಾಗುತ್ತಿದೆ.
ಈಗಾಗಲೇ 9ರಿಂದ 12ನೇ ತರಗತಿಗಳು ಪ್ರಾರಂಭವಾಗಿವೆ. ಒಂದರಿಂದಲೇ ಎಲ್ಲ ಹಂತಹ ಶಾಲೆಗಳು ಪ್ರಾರಂಭವಾಗಬೇಕೆಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆ, ಎಸ್‍ಡಿಎಂಸಿ ಸದಸ್ಯರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಲಹೆ ಸಮಿತಿಯ ಸೂಚನೆಯಂತೆ ಆರನೇ ತರಗತಿಯಿಂದ ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನ ಕೈಗೊಂಡಿದೆ.
ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಿರುವುದರಿಂದ ಹಾಗೂ ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಉಳಿದ ಜಿಲ್ಲೆಗಳಿಂತ ಹೆಚ್ಚಿರುವುದರಿಂದ ಈ ಭಾಗಗಳಲ್ಲಿ 6 ಹಾಗೂ 7ನೇ ತರಗತಿಗಳ ಪ್ರಾರಂಭಕ್ಕೆ ಅನುಮತಿ ನೀಡಿಲ್ಲ. ಉಳಿದ ಭಾಗಗಳಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಶಾಲೆಗಳು ಪ್ರಾರಂಭಗೊಳ್ಳಲಿದೆ.
ಕೇರಳ ಭಾಗದಲ್ಲಿ ಬರುವ ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್ ವರದಿ ಇದ್ದರೆ ಮಾತ್ರ ತರಗತಿಗಳಿಗೆ ಅನುಮಿತಿ ನೀಡಲಾಗುತ್ತದೆ. ಹಾಗೂ ರಾಜ್ಯದ ಯಾವುದೇ ಭಾಗದ ಶಾಲೆಗಳಿಗೆ ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿ ಇರುವುದಿಲ್ಲ.
‘ಇಂದಿನಿಂದ 6ನೇ ತರಗತಿಯಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಅಗತ್ಯ ಬಸ್ ವ್ಯವಸ್ಥೆ ಹಾಗೂ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ'
-ಸುರೇಶ್ ಕುಮಾರ್, ಶಿಕ್ಷಣ ಸಚಿವ







