ಶಂಭೂರು ಯಕ್ಷೋತ್ಸವದಲ್ಲಿ ಬೊಂಡಾಲ ಪ್ರಶಸ್ತಿ ಪ್ರದಾನ

ಬಂಟ್ವಾಳ, ಫೆ.21: ಯಕ್ಷಗಾನ ಒಂದು ಅಪೂರ್ವವಾದ ಪ್ರದರ್ಶನ ಕಲೆ. ಕರಾವಳಿಯಲ್ಲಿ ದೇವತಾರಾಧನೆಯ ರೂಪದಲ್ಲಿ ಪ್ರತಿದಿನ ಯಕ್ಷಗಾನ ಸೇವೆ ನಡೆಯುತ್ತದೆ. ಇದು ಪರಂಪರೆಯನ್ನು ಬೆಸೆಯುವ ಮಹತ್ವದ ಕಲೆಯಾಗಿ ಉಳಿದಿದೆ. ಬೊಂಡಾಲ ಕುಟುಂಬಿಕರು ತಲೆಮಾರುಗಳಿಂದ ಹರಕೆ ಬಯಲಾಟಗಳನ್ನು ಏರ್ಪಡಿಸುವ ಮೂಲಕ ಇದನ್ನು ಸತ್ಯವಾಗಿಸಿದ್ದಾರೆ’ ಎಂದು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಶಂಭೂರಿನಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಎರಡು ದಿನಗಳ ಯಕ್ಷೋತ್ಸವದಲ್ಲಿ ದ್ವಿತೀಯ ದಿನ ’ಬೊಂಡಾಲ ಪ್ರಶಸ್ತಿ ಪ್ರದಾನ’ ಮಾಡಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಕಟೀಲು ಮೇಳದಲ್ಲಿ 35 ವರ್ಷಗಳ ಕಲಾಸೇವೆ ಮಾಡಿದ ಶ್ರೀದೇವಿ ಪಾತ್ರಧಾರಿ ಬಾಯಾರಿನ ಸರವು ರಮೇಶ ಭಟ್ಟರಿಗೆ 2020-21ನೇ ಸಾಲಿನ ’ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸ್ಮಾರಕ ಯಕ್ಷಗಾನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಕಲಾಸಂಘಟಕ ಕೆ.ಲಕ್ಷ್ಮಿನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಹಾಗೂ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಕೀರ್ತಿಶೇಷ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಅವರ ಸಂಸ್ಮರಣಾ ಭಾಷಣ ಮಾಡಿ ಮಾತನಾಡಿದರು. ಶಂಭೂರಿನ ನಿವೃತ್ತ ಶಿಕ್ಷಕ ಎನ್. ಕೃಷ್ಣರಾಜ ಶೆಟ್ಟಿ ಅತಿಥಿಗಳಾಗಿದ್ದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಸಮಿತಿ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ಬೊಂಡಾಲ ವಂದಿಸಿದರು. ಬೊಂಡಾಲ ದೇವಿಪ್ರಸಾದ ಶೆಟ್ಟಿ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.







