ದೊಡ್ಡರಂಗೇಗೌಡರ 'ಸಂವಿಧಾನ ಬದಲಾವಣೆ' ಹೇಳಿಕೆ ಅವಿವೇಕದ ಪರಮಾವಧಿ: ಪ್ರೊ.ಮಹೇಶ್ ಚಂದ್ರಗುರು

ಮೈಸೂರು, ಫೆ.21: ಸಂವಿಧಾನದ ಬಗ್ಗೆ ಯಾವುದೇ ಪರಿಜ್ಞಾನ ಹೊಂದಿಲ್ಲದ ಸಾಹಿತಿ ಪ್ರೊ.ದೊಡ್ಡರಂಗೇಗೌಡರು ಸಂದರ್ಭೋಚಿತ ತಿದ್ದುಪಡಿಯ ಬದಲಾಗಿ, ಸಂವಿಧಾನ ಮೂಲ ಸ್ವರೂಪನ್ನೇ ಬದಲಾಯಿಸಬೇಕೆಂದು ವಾದಿಸುತ್ತಿರುವುದು ಅವಿವೇಕದ ಪರಮಾವಧಿ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗರು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ, ಪ್ರಭುತ್ವವನ್ನು ಮೆಚ್ಚಿಸುವ ಸಲುವಾಗಿ ಭಾರತೀಯ ಸಂವಿಧಾನವನ್ನು ಬದಲಾಯಿಸುವ ಅಗತ್ಯತೆಯನ್ನು ಪ್ರಸ್ತಾಪಿಸಿರುವುದು ಅನಾರೋಗ್ಯಕರ ಬೆಳವಣಿಗೆ ಎಂದು ಕಿಡಿಕಾರಿದರು.
ಭಾರತದ ಚರಿತ್ರೆ ಪರಂಪರೆ ಬಹುಸಂಸ್ಕೃತಿ, ಬಹು ಧರ್ಮಗಳು ಮತ್ತು ಬಹುಜನಾಂಗಗಳ ಬಗ್ಗೆ ಸಂವಿಧಾನ ಶಿಲ್ಪಿಗಳು ಅಪಾರ ಅರಿವನ್ನುಹೊಂದಿ ಎಲ್ಲರಿಗೂ ಒಳಿತುಂಟನ್ನು ಮಾಡುವ ಸಂವಿಧಾನ ಬರೆದಿರುವುದು ಪ್ರಶಂಸನೀಯ ಸಂಗತಿಯಾಗಿದೆ. ಯಾವುದೇ ದೇಶದ ಸಂವಿಧಾನವನ್ನು ಬದಲಾದ ಪರಿಸರ ಮತ್ತು ಅಗತ್ಯತೆಗಳಿಗೆ ಅನುಸಾರವಾಗಿ ತಿದ್ದುಪಡಿ ಮಾಡುವ ಅವಕಾಶ ಇದೆ. ಈಗಾಗಲೇ ಭಾರತೀಯ ಸಂವಿಧಾನವನ್ನು ರಾಷ್ಟ್ರೀಯ ಅಗತ್ಯತೆಗಳಿಗೆ ಅನುಸಾರವಾಗಿ 104 ಬಾರಿ ತಿದ್ದುಪಡಿ ಮಾಡಲಾಗಿದೆ. ಇಂತಹ ತಿದ್ದುಪಡಿಗಳಿಂದ ಸಂವಿಧಾನದ ಮೂಲ ತತ್ವಗಳಿಗೆ ಹಾಗೂ ಪ್ರಜೆಗಳ ಹಿತರಕ್ಷಣೆಗೆ ಯಾವುದೇ ರೀತಿಯಲ್ಲೂ ಧಕ್ಕೆಯುಂಟಾಗಿಲ್ಲ. ಸಂವಿಧಾನದ ಬಗ್ಗೆ ಯಾವುದೇ ಪರಿಜ್ಞಾನ ಹೊಂದಿಲ್ಲದ ದೊಡ್ಡರಂಗೇಗೌಡರು ಸಂದರ್ಭೋಚಿತ ತಿದ್ದುಪಡಿಯ ಬದಲಾಗಿ, ಸಂವಿಧಾನ ಮೂಲ ಸ್ವರೂಪನ್ನೇ ಬದಲಾಯಿಸಬೇಕೆಂದು ವಾದಿಸುತ್ತಿರುವುದು ಅವಿವೇಕದ ಪರಮಾವಧಿಯಾಗಿದೆ ಎಂದು ತಿಳಿಸಿದ್ದಾರೆ.
ಹಿಂದುತ್ವಕ್ಕೆ ನಿಷ್ಠವಾಗಿರುವ ಮೋದಿಯವರ ಪ್ರಭುತ್ವದಲ್ಲಿ ಸಾಹಿತಿಗಳು ಮತ್ತು ಬುದ್ಧಿಜೀವಿಗಳು, ತಮ್ಮ ಸ್ವಂತ ಲಾಭಕ್ಕೋಸ್ಕರ ವೃತ್ತಿ ನಿಷ್ಠೆ ಮತ್ತು ಸಂವಿಧಾನದ ನಿಷ್ಠೆಗಳನ್ನು ಮರೆತು, ವ್ಯಕ್ತಿ ಪೂಜೆಯಲ್ಲಿ ನಿರತರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಶಸ್ತಿ, ಪುರಸ್ಕಾರ, ಅಧಿಕಾರ ಮತ್ತು ಇತರ ಲಾಭಗಳ ಹಿಂದೆ ಬಿದ್ದಿರುವ ಸಾಹಿತಿಗಳ ಸಂಖ್ಯೆ ಪ್ರಸ್ತುತ ಸಂದರ್ಭಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದು ದುರದೃಷ್ಟಕರ. ಭಾರತೀಯ ಸಂವಿಧಾನದ ಪ್ರಸ್ತಾವನೆ, ರಾಜ್ಯ ನಿರ್ದೇಶಿತ ತತ್ವಗಳು, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ಕಲ್ಯಾಣ ರಾಜ್ಯ ಸ್ಥಾಪನೆ ಆಶಯಗಳು, ಬಹುತ್ವ, ಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ ಮೊದಲಾದ ಅಂಶಗಳನ್ನು ಯಾವುದೇ ಕಾರಣಕ್ಕೂ ಸರ್ಕಾರವಾಗಲಿ, ಸ್ಥಾಪಿತ ಹಿತಾಸಕ್ತಿಗಳಾಗಲಿ ಬದಲಾಯಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.
ಹಿಂದೆ ರಾಷ್ಟ್ರಪತಿಯಾಗಿದ್ದ ಕೆ.ಆರ್.ನಾರಾಯಣನ್ ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ, ಸಂವಿಧಾನದಲ್ಲಿ ಏನೂ ತಪ್ಪಿಲ್ಲ, ಆದರೆ ನಿಮ್ಮ ಆಳ್ವಿಕೆಯಲ್ಲಿ ತಪ್ಪಿದೆ ಎಂದು ಸ್ಪಷ್ಟವಾಗಿ ಹಿತವಚನ ನೀಡಿ, ಸಂವಿಧಾನ ಮೂಲ ಸ್ವರೂಪ ಬದಲಾಗುವುದನ್ನು ಪ್ರಜ್ಞಾ ಪೂರ್ವಕವಾಗಿ ಜವಾಬ್ದಾರಿಯುತವಾಗಿ ತಪ್ಪಿಸಿದರು. ಆದರೆ ಇಂದು ನರೇಂದ್ರ ಮೋದಿ ಬಳಗ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದನ್ನು ವಿರೋಧಿಸಿ ದೇಶದ ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮೊದಲಾದ ದುರ್ಬಲ ವರ್ಗಗಳು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನು ನೋಡಿಯೂ ಸಹ ಜವಾಬ್ದಾರಿಯುತ ಸ್ಥಾನದಲ್ಲಿರುವ ದೊಡ್ಡರಂಗೇಗೌಡರು, ಸಂವಿಧಾನವನ್ನು ಬದಲಾಯಿಸಬೇಕೆಂದು ಹೇಳುತ್ತಿರುವುದು ಸಾರ್ವಜನಿಕರನ್ನು ದಾರಿತಪ್ಪಿಸುವ ದುರುದ್ದೇಶ ಹೊಂದಿದೆ. ಇವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಸಂವಿಧಾನ ನಿಷ್ಠರಾದ ಮತ್ತು ಬಹುಜನರ ಶ್ರೇಯಸ್ಸಿಗೆ ಬದ್ಧರಾದ ಮತ್ತೋರ್ವ ಜವಾಬ್ದಾರಿಯುತ ಸಾಹಿತಿಯ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನ ಏರ್ಪಡಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







