ರಾಜ್ಯಸಭಾ ಸದಸ್ಯ ನಾರಾಯಣರಿಗೆ ಸನ್ಮಾನ
ಮಂಗಳೂರು, ಫೆ,21: ದ.ಕ ಮತ್ತು ಉಡುಪಿ ಜಿಲ್ಲಾ ನೇಕಾರ ಸಮುದಾಯದ ನಾರಾಯಣಾಭಿನಂದನಾ ಸಮಿತಿ ವತಿಯಿಂದ ರಾಜ್ಯಸಭಾ ಸದಸ್ಯ ನಾರಾಯಣ ಕೆ. ಅವರನ್ನು ಅಭಿನಂದಿಸುವ ಕಾರ್ಯಕ್ರಮ ರವಿವಾರ ಅಶೋಕನಗರದ ದೇವಾಂಗಭವನದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಉಪ್ಪಳ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀಮಂತರು ಎಂಬ ಕಾರಣಕ್ಕೆ ನಾರಾಯಣ ಕೆ. ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಸಿಕ್ಕಿಲ್ಲ. ಸಮಾಜಕ್ಕಾಗಿ ಮಾಡಿದ ಸೇವೆ, ಸರಳತೆ ಮತ್ತಿತರ ಅರ್ಹತೆಗಳಿಂದ ದೊರಕಿದೆ ಎಂದು ಹೇಳಿದರು.
ನಾರಾಯಣರು ಕೈಯಾಡಿಸದ ಸೇವಾ ಕ್ಷೇತ್ರವಿಲ್ಲ. ಆದರೆ ಬಾಹ್ಯ ತೋರ್ಪಡಿಕೆ ಕಡಿಮೆಯಾದುದರಿಂದ ಹೆಚ್ಚಿನವರಿಗೆ ಅವರ ಸೇವೆ ಕುರಿತು ಗೊತ್ತಿಲ್ಲ. ತಾನು ಮಾಡಿದ ಸೇವೆ ಅರ್ಹರಿಗೆ ತಲುಪಬೇಕು ಎನ್ನುವ ತುಡಿತ ಅವರಲ್ಲಿದೆ. ಸಮಾಜಕ್ಕೆ ಕೊಡುಗೆ ನೀಡುವ ಜತೆಗೆ ರಾಷ್ಟ್ರನಿರ್ಮಾಣದ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣ ಕೆ., ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಪೇಕ್ಷೆ ಪಟ್ಟಿರಲಿಲ್ಲ. ಆಯ್ಕೆಯ ಬಗ್ಗೆಯೂ ಕೊನೇ ಕ್ಷಣದವರೆಗೆ ಗೊತ್ತಿರಲಿಲ್ಲ. ಇದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಿಕ್ಕ ಪ್ರತಿಫಲವಾಗಿದೆ. ರಾಜ್ಯ ಸಭಾಸದಸ್ಯನಾಗಿ ಜನ ಸೇವೆ ಮಾಡುವುದರ ಜತೆಗೆ, ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ಸಿಎ ಅಂತಿಮ ಪರೀಕ್ಷೆಯಲ್ಲಿ ದೇಶದಲ್ಲೇ 6ನೇ ರ್ಯಾಂಕ್ ಪಡೆದ ಅಕ್ಷಯ್ ಕಾಸರಗೋಡು ಅವರನ್ನು ಅಭಿನಂದಿಸಲಾಯಿತು. ವಿವಿಧ ನೇಕಾರ ಸಮುದಾಯಗಳ ಒಕ್ಕೂಟದ ಲಾಂಛನವನ್ನು ರಾಜ್ಯಸಭಾ ಸದಸ್ಯ ನಾರಾಯಣ ಕೆ. ಅನಾವರಣಗೊಳಿಸಿದರು.
ಶ್ರೀ ಕುಕ್ಕಾಡಿ ಕ್ಷೇತ್ರ ಅಧ್ಯಕ್ಷ ಎಂ.ಮುರಳೀಧರ ಶೆಟ್ಟಿ ಅಧ್ಯಕ್ಷ ವಹಿಸಿದ್ದರು. ಮಾಜಿ ಶಾಸಕ ಕುಂಬ್ಳೆ ಸುಂದರರಾವ್, ಉದ್ಯಮಿ ಸರೋಜಿನಿ ಗೋವರ್ದನ್, ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ರಾಧಾಕೃಷ್ಣ ಕೆ., ಜಯಲಕ್ಷ್ಮಿ ಶೆಟ್ಟಿ, ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಎಂ.ಜಯರಾಮ ಶೆಟ್ಟಿಗಾರ್, ಪಾಂಡೇಶ್ವರ ಶ್ರೀಚೌಡೇಶ್ವರಿ ಕ್ಷೇತ್ರ ಅಧ್ಯಕ್ಷ ಎನ್.ಬಿ.ಶರವಣನ್, ಮಂಗಳೂರು ದೇವಾಂಗ ಸಮಾಜ ಅಧ್ಯಕ್ಷ ದುರ್ಗೇಶ್ ಚೆಟ್ಟಿಯಾರ್ ಕೋಡಿಲರ್, ದಕ್ಷಿಣ ವಲಯ ದೇವಾಂಗ ಸಮಾಜ ಅಧ್ಯಕ್ಷ ವೆಂಕಟೇಶ್, ಗ್ರಾಮಚಾವಡಿ ಅಧ್ಯಕ್ಷ ಶಶಿಧರ ಶೆಟ್ಟಿ, ಬಾಲಕೃಷ್ಣ ಕಲ್ಬಾವಿ ಉಪಸ್ಥಿತರಿದ್ದರು. ಚೀರುಂಬಾ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ ಅಧ್ಯಕ್ಷೆ ಶಾಂತಾ ರವೀಂದ್ರ ಸ್ವಾಗತಿಸಿದರು. ಸುಧೀರ್ ಶೆಟ್ಟಿಗಾರ್ ಪ್ರಸ್ತಾವಿಸಿದರು. ಗಿರೀಶ್ ಜಿ.ಶೆಟ್ಟಿಗಾರ್ ಅಭಿನಂದನಾ ಮಾತುಗಳನ್ನಾಡಿದರು.







