ಬಾಲಕಿಯರ ವಿದ್ಯಾರ್ಥಿ ನಿಲಯದಿಂದ ಪದವಿ ವಿದ್ಯಾರ್ಥಿನಿ ನಾಪತ್ತೆ

ಪಾಂಡವಪುರ, ಫೆ.21: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಟ್ಟಣದ ಶಾಂತಿನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ ಬಿ.ಎಸ್.ಸಿಂಧು ಎಂಬಾಕೆ ಕಾಣೆಯಾಗಿದ್ದಾರೆಂದು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಿಂಧು, ಬೇಬಿ ಗ್ರಾಮದ ಲೇಟ್ ಶಿವಣ್ಣರ ಪುತ್ರಿಯಾಗಿದ್ದು, ಫೆ.17ರಂದು ಬೆಳಗ್ಗೆ 9.30ರಲ್ಲಿ ತಿಂಡಿ ಮುಗಿಸಿದ್ದು, ಅದೇ ದಿನ ಸಂಜೆ ಸುಮಾರು 6.30ರಲ್ಲಿ ವಸತಿ ನಿಲಯದ ಬಾಲಕಿಯರ ಹಾಜರಾತಿ ಪಡೆಯುವ ಸಂದರ್ಭದಲ್ಲಿ ಸಿಂಧು ಗೈರಾಗಿದ್ದಳೆನ್ನಲಾಗಿದೆ.
ವಿದ್ಯಾರ್ಥಿ ಮೊಬೈಲ್‍ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಬಳಿಕ ಆಕೆಯ ಪೋಷಕರಿಗೆ ದೂರವಾಣಿ ಕರೆಮಾಡಿ ವಿಚಾರ ತಿಳಿಸಲಾಗಿದೆ. ಕಾಣೆಯಾಗಿರುವ ವಿದ್ಯಾರ್ಥಿನಿ ಸಿಂಧು ಅವರನ್ನು ಪತ್ತೆ ಮಾಡಿಕೊಡಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿದ್ಯಾರ್ಥಿ ನಿಲಯ ಮೇಲ್ವಿಚಾರಕಿ ಎಸ್.ಶೀಲಾ ಮನವಿ ಮಾಡಿದ್ದಾರೆ.
ಕಾಣೆಯಾದ ವೇಳೆ ವಿದ್ಯಾರ್ಥಿನಿ ಸಿಂಧು ಚೂಡಿದಾರ್ ಧರಿಸಿದ್ದಳು. 21 ವರ್ಷ ವಯಸ್ಸಿನ 5.5 ಅಡಿ ಎತ್ತರವಿದ್ದು, ಮುಖ ಎಣ್ಣೆಗೆಂಪು ಬಣ್ಣವಿದ್ದು, ಎಡಗೈಯಲ್ಲಿ ಡಿ ಬಾಸ್ ಎಂದು ಹಸಿರು ಹಚ್ಚೆ ಇರುತ್ತದೆ. ಯಾರಿಗಾದರೂ ಈಕೆ ಬಗ್ಗೆ ಸುಳಿವು ಸಿಕ್ಕಲ್ಲಿ ತಕ್ಷಣವೇ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ-08236-255132ಗೆ ಮಾಹಿತಿ ನೀಡುವಂತೆ ಸಬ್‍ಇನ್ಸ್‍ಪೆಕ್ಟರ್ ಪೂಜಾ ಕುಂಟೋಜಿ ಕೋರಿದ್ದಾರೆ.







