ಕ್ರೈಸ್ತರ ಅಭಿವೃದ್ಧಿಗೆ ಬಜೆಟ್‍ನಲ್ಲಿ 400 ಕೋಟಿ ರೂ. ಮೀಸಲಿಡಲು ಆಗ್ರಹ
ಬೆಂಗಳೂರು, ಫೆ. 22: ‘ಕ್ರೈಸ್ತ ಸಮುದಾಯ ಹಿಂದುಳಿದ ವರ್ಗಗಳ ಪ್ರವರ್ಗ 3ಬಿ ಅಡಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದೇವೆ. ಆದರೆ, ಕ್ರೈಸ್ತರೊಂದಿಗೆ ಜೈನ, ಮರಾಠ ಸೇರಿ ಇತರೆ 5 ಪಂಗಡಗಳು ಮತ್ತು 50 ಉಪಜಾತಿಗಳಿದ್ದು, ಇರುವ ಶೇ.5ರಷ್ಟು ಮೀಸಲಾತಿ ಪೈಕಿ ಶೇ.50ರಷ್ಟನ್ನು ಪ್ರತ್ಯೇಕವಾಗಿ ಕ್ರೈಸ್ತ ಸಮುದಾಯಕ್ಕೆ ಮೀಸಲಿಡಬೇಕು' ಎಂದು ಕರ್ನಾಟಕ ಕ್ರಿಶ್ಚಿಯನ್ ಪೊಟಿಲಿಕಲ್ ಲೀಡರ್ಸ್ ಫೋರಂ ಆಗ್ರಹಿಸಿದೆ.
ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಸಂಚಾಲಕ ಅಂತೋಣಿ ವಿಕ್ರಮ್, ‘ಕ್ರೈಸ್ತ ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಸಬೇಕು. 2021ರ ಜನಗಣತಿಯ ಸಮಯದಲ್ಲಿ ಕ್ರೈಸ್ತ ಸಮುದಾಯವನ್ನು ಒಟ್ಟಿಗೆ ಗಣತಿ ಮಾಡಬೇಕು. ಕ್ರೈಸ್ತ ಮುಖಂಡರು ವಿವಿಧ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಸಮುದಾಯವನ್ನು ಗುರುತಿಸಬೇಕು' ಎಂದು ಒತ್ತಾಯಿಸಿದರು.
‘ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಕ್ರೈಸ್ತ ಅಭಿವೃದ್ಧಿ ನಿಗಮವನ್ನಾಗಿ ಪರಿವರ್ತನೆ ಮಾಡಬೇಕು. ಸಮುದಾಯದ ಅಭಿವೃದ್ಧಿಗೆ 400 ಕೋಟಿ ರೂ.ಅನುದಾನವನ್ನು ಆಯವ್ಯಯದಲ್ಲಿ ಮೀಸಲಿಡಬೇಕು' ಎಂದು ಮನವಿ ಮಾಡಿದ ಅಂತೋಣಿ ವಿಕ್ರಮ್, ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಫೋರಂನ ಬೆಂಬಲವಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಫೋರಂನ ಸಹ ಸಂಚಾಲಕರಾದ ಡಾ.ರೆ.ಮನೋಹರ ಚಂದ್ರಪ್ರಸಾದ್, ಅನಿಲ್ ಅಂತೋಣಿ, ಮಾಥ್ಯು, ಕ್ರಿಸ್ಟೋಫರ್ ಸೇರಿದಂತೆ ಇನ್ನಿತರರು ಹಾಜರಿದ್ದರು.







