ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ನೂತನ ಕಚೇರಿ ಉದ್ಘಾಟನೆ

ಮಂಗಳೂರು, ಫೆ.23: ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ನೂತನ ಕಚೇರಿ ಮತ್ತು ಮಿನಿ ಸಭಾಂಗಣವನ್ನು ನಗರದ ಪಂಪ್‌ವೆಲ್‌ನ ಓನಿಕ್ಸ್ ಕಟ್ಟಡದ ಮೊದಲ ಮಹಡಿಯಲ್ಲಿನ ಕಚೇರಿಯಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಸಂಸ್ಥೆ ಎರಡು ವರ್ಷಗಳ ಹಿಂದೆಯಷ್ಟೇ ಆರಂಭಗೊಂಡಿದೆ. ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಸಂಘದ ಪದಾಧಿಕಾರಿಗಳು ಕಚೇರಿ ಪ್ರಾರಂಭದೊಂದಿಗೆ ಯಶಸ್ಸು ಸಾಧಿಸಿದ್ದಾರೆ. ಸಂಸ್ಥೆ ಆರಂಭಿಸುವುದು ಸುಲಭವಾದರೂ ಅದನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ ಎಂದರು.
ಇದು ಸ್ಪರ್ಧಾತ್ಮಕ ಯುಗವಾಗಿದೆ. ಈ ಮೊದಲು ಕ್ಯಾಟರಿಂಗ್ ಸಂಸ್ಥೆಯವರಲ್ಲಿ ವೈಮನಸ್ಸು ಮೂಡುತ್ತಿತ್ತು. ಸಂಘಟನೆ ಆರಂಭದೊಂದಿಗೆ ಆ ವೈಮನಸ್ಸು ಮೂಡುವುದನ್ನು ತಡೆ ಹಿಡಿದಂತಾಗಿದೆ. ಎಲ್ಲೆಡೆಯೂ ಒಂದೇ ದರ ನಿಗದಿ ಮಾಡಿರುವುದು ಜನರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಕ್ಯಾಟರಿಂಗ್ ಸಂಸ್ಥೆಯು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಕ್ಯಾಟರಿಂಗ್‌ನವರು ಸಭಾಂಗಣ ನಡೆಸಲು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿ ದ್ದಾರೆ. ಕೊರೋನದಿಂದಾಗಿ ಹೆಚ್ಚು ಸಮಸ್ಯೆ ತಲೆದೋರಿದೆ. ಕ್ಯಾಟರಿಂಗ್, ಶಾಮಿಯಾನ ಸಂಘಟನೆಗಳಿಗೆ ಮುಂದಿನ ದಿನಗಳಲ್ಲಿ ತೆರಿಗೆಯಲ್ಲಿ ವಿನಾಯಿತಿ ನೀಡಲು ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.
ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಚಿಕ್ಕ ಪುಟ್ಟ ಕಾರ್ಯಕ್ರಮಕ್ಕೂ ಕ್ಯಾಟರಿಂಗ್ ಗೆ ಆರ್ಡರ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಉತ್ತಮ ಗುಣಮಟ್ಟದ ಆಹಾರ ಮತ್ತು ಸೇವೆಯನ್ನು ಕ್ಯಾಟರಿಂಗ್‌ನವರು ನೀಡುವಂತಾಗಬೇಕು. ಮದುವೆ, ಶುಭ ಸಮಾರಂಭಗಳ ಯಶಸ್ಸು ಆ ಕಾರ್ಯಕ್ರಮಕ್ಕೆ ಆಹಾರ ಖಾದ್ಯ ಒದಗಿಸುವ ಕ್ಯಾಟರಿಂಗ್‌ಗೆ ಸಲ್ಲುತ್ತದೆ. ಸಂಸ್ಥೆಯು ಬಲವಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಡ್ಕಾಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಕರೀಂ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್, ಮನಪಾ ಸ್ಥಳೀಯ ಕಾರ್ಪೊರೇಟರ್ ಸಂದೀಪ್ ಗರೋಡಿ, ಅಡ್ಕಾಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಕರೀಂ ಅಡ್ಕ, ಬೆಂಗಳೂರಿನ ಶೆಪ್‌ಟಾಕ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸೆಸ್‌ನ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಪೂಜಾರಿ, ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ಅನೀಸ್ ಮುಹಮ್ಮದ್ ಶೇಕ್, ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಲಿ ಕುಂಬ್ಳೆ, ದ.ಕ. ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಕ್ಲೇವರ್ ಡಿಸೋಜ, ಸಂಘದ ಕಾರ್ಯದರ್ಶಿ ಯಶವಂತ ಪೂಜಾರಿ, ಕೋಶಾಧಿಕಾರಿ ಅವಿಲ್ ರೊನಾಲ್ಡ್ ರೇಗೊ, ಸಂಘದ ಗೌರವ ಅಧ್ಯಕ್ಷರಾದ ಸುಧಾಕರ್ ಕಾಮತ್, ಮುಹಮ್ಮದ್ ಇಕ್ಬಾಲ್, ವೇವೆಲ್ ಲಸ್ರಾದೋ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಾಜಗೋಪಾಲ ರೈ ಸ್ವಾಗತಿಸಿದರು. ಪ್ರಾಪ್ತಿ ಪ್ರಾರ್ಥಿಸಿದರು. ದಿನೇಶ್ ಸುವರ್ಣ ರಾಯಿ, ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ವಂದಿಸಿದರು.













