ಹಿಂದುಳಿದ ಸಮುದಾಯಗಳ ಏಳಿಗೆಗೆ ನಿಗಮ ಮಂಡಳಿ ಸ್ಥಾಪಿಸಿದ್ದೇವೆ: ಹೈಕೋರ್ಟ್ ಗೆ ಹೇಳಿಕೆ
ಬೆಂಗಳೂರು, ಫೆ.23: ಹಿಂದುಳಿದ ಸಮುದಾಯಗಳ ಏಳಿಗೆಗೆ ನಿಗಮ ಮಂಡಳಿಗಳನ್ನು ಸ್ಥಾಪಿಸುವುದು ಸರಕಾರದ ನೀತಿಯಾಗಿದೆ. ಆ ಹಿನ್ನೆಲೆಯಲ್ಲಿ ಸರಕಾರ ತನ್ನ ಅಧಿಕಾರ ಬಳಸಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ತಿಳಿಸಿದೆ.
ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ, ಮರಾಠ ಅಭಿವೃದ್ಧಿ ಮಂಡಳಿ ಸೇರಿ ಜಾತಿಗೊಂದು ನಿಗಮ-ಮಂಡಳಿಯನ್ನು ಸ್ಥಾಪಿಸುವ ಸರಕಾರದ ಕ್ರಮ ಪ್ರಶ್ನಿಸಿ ವಕೀಲ ಎಸ್. ಬಸವರಾಜು ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೋಮವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರಕಾರದ ಪರ ವಕೀಲರು, ಈ ಬಗ್ಗೆ ವಿವರಿಸಲು ಮತ್ತು ನಿಗಮ-ಮಂಡಳಿಗಳನ್ನು ಸ್ಥಾಪಿಸಲು ಸರಕಾರಕ್ಕಿರುವ ಶಾಸನಾತ್ಮಕ ಹಾಗೂ ಕಾನೂನಾತ್ಮಕ ಅಧಿಕಾರದ ಬಗ್ಗೆ ವಿವರಣೆ ನೀಡಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ವಾದಿಸಿ, ಸರಕಾರ ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು, ಆಯಾಯ ಸಮುದಾಯಗಳ ಮತಗಳನ್ನು ಸೆಳೆಯಲು ನಿಗಮ-ಮಂಡಳಿಗಳನ್ನು ರಚಿಸಿದೆ ಎಂದು ಪೀಠಕ್ಕೆ ತಿಳಿಸಿದರು.







