ಮಂಗಳ ಗ್ರಹದ ‘ಮೊದಲ ಧ್ವನಿ’ ಬಿಡುಗಡೆಗೊಳಿಸಿದ ನಾಸಾ

ಫೋಟೊ ಕೃಪೆ:: //twitter.com/NASA
ವಾಶಿಂಗ್ಟನ್, ಫೆ. 23: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಶನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಸೋಮವಾರ ಮಂಗಳ ಗ್ರಹದ ಮೊದಲ ಧ್ವನಿಯನ್ನು ಬಿಡುಗಡೆಗೊಳಿಸಿದೆ.
ಕೆಂಪು ಗ್ರಹದಲ್ಲಿ ನಿಧಾನವಾಗಿ ಗಾಳಿ ಬೀಸುವ ಸದ್ದು ಈ ರೆಕಾರ್ಡಿಂಗ್ನಲ್ಲಿ ಕೇಳುತ್ತದೆ. ಈ ಧ್ವನಿಯನ್ನು ನಾಸಾದ ಮಂಗಳ ಗ್ರಹ ಶೋಧಕ ‘ಪರ್ಸೀವರನ್ಸ್’ ದಾಖಲಿಸಿದೆ.
ಮಂಗಳ ಗ್ರಹದ ಮೇಲೆ ‘ಪರ್ಸವರನ್ಸ್’ ಇಳಿಯುವ ಮೊದಲ ವೀಡಿಯೊವನ್ನೂ ನಾಸಾ ಬಿಡುಗಡೆಗೊಳಿಸಿದೆ.
‘‘10 ಸೆಕೆಂಡ್ಗಳ ಧ್ವನಿಮುದ್ರಿಕೆಯಲ್ಲಿ ಮಂಗಳ ಗ್ರಹದಲ್ಲಿ ಗಾಳಿ ಬೀಸುವ ಸದ್ದು ಕೇಳುತ್ತದೆ. ಪರ್ಸೀವರನ್ಸ್ ಈ ಸದ್ದನ್ನು ದಾಖಲಿಸಿಕೊಂಡಿದ್ದು ಭೂಮಿಗೆ ಕಳುಹಿಸಿದೆ’’ ಎಂದು ‘ಪರ್ಸೀವರನ್ಸ್’ನಲ್ಲಿರುವ ಕ್ಯಾಮರ ಮತ್ತು ಮೈಕ್ರೋಫೋನ್ ವ್ಯವಸ್ಥೆಯ ಪ್ರಧಾನ ಇಂಜಿನಿಯರ್ ಡೇವ್ ಗ್ರುಯೆಲ್ ಹೇಳಿದರು.
‘‘ಮಂಗಳ ಗ್ರಹದ ಮೇಲಿನ ನೆಲಸ್ಪರ್ಶದಂಥ ಘಟನೆಯನ್ನು ದಾಖಲಿಸಲು ನಮಗೆ ಮೊದಲ ಬಾರಿಗೆ ಸಾಧ್ಯವಾಗಿದೆ’’ ಎಂದು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿಯ ನಿರ್ದೇಶಕ ಮೈಕಲ್ ವ್ಯಾಟ್ಕಿನ್ಸ್ ಹೇಳಿದರು.





