ಶಿಥಿಲಾವಸ್ಥೆಯಲ್ಲಿ ಧಕ್ಕೆಯ ಮೀನು ಶುಚಿಗೊಳಿಸುವ ಶೆಡ್ : ದುರಸ್ತಿಗಾಗಿ ಸಚಿವರಿಗೆ ಮನವಿ

ಮಂಗಳೂರು, ಫೆ. 23: ಹಳೆ ಬಂದರು ಮೀನುಗಾರಿಕಾ ಧಕ್ಕೆಯಲ್ಲಿ ಮೀನುಗಾರ ಮಹಿಳೆಯರು ಮೀನು ಶುಚಿಗೊಳಿಸಲು, ಕತ್ತರಿಸಲು ಉಪಯೋಗಿಸುತ್ತಿರುವ ಕಬ್ಬಿಣದ ರಾಡ್ ಹಾಗೂ ಶೀಟ್‌ಗಳನ್ನು ಬಳಸಿ ನಿರ್ಮಿಸಲಾಗಿರುವ ಶೆಡ್ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಗಾಗಿ ಸಚಿವ ಅಂಗಾರರಿಗೆ ಮನವಿ ಸಲ್ಲಿಸಿದರು.
ಮೀನುಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಮೀನುಗಾರಿಕಾ ಧಕ್ಕೆಗೆ ಸಚಿವ ಅಂಗಾರ ಇಂದು ಭೇಟಿ ನೀಡಿದ್ದ ವೇಳೆ ತಮ್ಮ ಅಳಲನ್ನು ಮೀನುಗಾರ ಮಹಿಳೆಯರು ತೋಡಿಕೊಂಡರು.
‘‘ನಾವು ಸುಮಾರು 25ಕ್ಕೂ ಅಧಿಕ ಮೀನುಗಾರ ಮಹಿಳೆಯರು (ಹೊರ ರಾಜ್ಯದ ಕೆಲ ಮಹಿಳೆಯರು ಹಾಗೂ ಪುರುಷರೂ ಸೇರಿದ್ದಾರೆ) ಕಳೆದ ಸುಮಾರು 15 ವರ್ಷಗಳಿಂದ ಇಲ್ಲಿ ವ್ಯಾಪಾರಸ್ಥರು ಖರೀದಿಸಿದ ಮೀನನ್ನು ಶುಚಿಗೊಳಿಸಿ ಕತ್ತರಿಸಿ ನೀಡುವ ಕಾಯಕ ಮಾಡುತ್ತಿದ್ದೇವೆ. ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಶೆಡ್‌ನ ಕಬ್ಬಿಣದ ರಾಡ್‌ಗಳು ಮುರಿದು ಬೀಳಲಾರಂಭಿಸಿವೆ. ಮೇಲಿನ ಸಿಮೆಂಟ್ ಶೀಟ್ ಗಳು ಕೂಡಾ ಅಲ್ಲಲ್ಲಿ ತುಂಡಾಗಿದ್ದು, ಇಲ್ಲಿ ಕೆಲಸ ಮಾಡಲು ಅಪಾಯದ ಪರಿಸ್ಥಿತಿ ಇದೆ’’ ಎಂದು ಮೀನುಗಾರ ಮಹಿಳೆಯಾದ ಗಿರಿಜಾ ತಿಳಿಸಿದ್ದಾರೆ.
ಇದೇ ವೇಳೆ ಧಕ್ಕೆಯಲ್ಲಿ ಮೀನುಗಾರರಿಗೆ ನಿರ್ಮಿಸಲಾದ ವಿಶ್ರಾಂತಿ ಕೊಠಡಿಯೂ ಅಸಮರ್ಪಕವಾಗಿದ್ದು, ಸುವ್ಯವಸ್ಥಿತ ಕೊಠಡಿ ನಿರ್ಮಿಸು ವಂತೆಯೂ ಸಚಿವರನ್ನು ಆಗ್ರಹಿಸಲಾಯಿತು.
2ನೆ ಹಂತದ ಹಾಗೂ 3ನೆ ಹಂತದ ಮೀನುಗಾರಿಕಾ ಧಕ್ಕೆ ಪ್ರದೇಶವನ್ನು ವೀಕ್ಷಿಸಿದ ಅವರು ಮೀನುಗಾರ ಮುಖಂಡರ ಸಮಸ್ಯೆಗಳನ್ನು ಆಲಿಸಿ ಕೊಂಡರಲ್ಲದೆ, ಅಧಿಕಾರಿಗಳಿಂದ ಮಾಹಿತಿಯನ್ನೂ ಪಡೆದರು.





