80 ಕೋಟಿ ರೂ. ವಿದ್ಯುತ್ ಬಿಲ್ ತಂದ ಆಘಾತ:ಬಿಪಿ ಹೆಚ್ಚಾಗಿ ಆಸ್ಪತ್ರೆ ಸೇರಿದ ವೃದ್ಧ
ಮಹಾರಾಷ್ಟ್ರ ವಿದ್ಯುತ್ ನಿಗಮದ ಪ್ರಮಾದ

ಸಾಂದರ್ಭಿಕ ಚಿತ್ರ
ಮುಂಬೈ,ಫೆ.21: ಮಹಾರಾಷ್ಟ್ರದ ರಾಜ್ಯ ವಿದ್ಯುತ್ ವಿತರಣಾ ನಿಗಮ (ಎಂಎಸ್ಇಡಿಎಲ್)ನ ಬಿಲ್ಲಿಂಗ್ನಲ್ಲಿ ಆದ ಪ್ರಮಾದವು ನಲಸೋಪಾರಾ ಪಟ್ಟಣದ 80 ವರ್ಷದ ವಯೋವೃದ್ಧರೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆ ಸೇರುವಂತೆ ಮಾಡಿದೆ.
ಮಹಾರಾಷ್ಟ್ರದ ನಲಸೋಪಾರಾ ಪಟ್ಟಣದ ನಿವಾಸಿ, 80 ವರ್ಷ ವಯಸ್ಸಿನ ಗಣಪತಿ ನಾಯ್ಕ್ (80)ಗೆ ತನ್ನ ಮನೆಗೆ 80 ಕೋಟಿ ರೂ. ವಿದ್ಯುತ್ಶುಲ್ಕ ಬಿಲ್ ಬಂದಾಗ ತೀವ್ರ ಆಘಾತವಾಯಿತು. ಅವರ ರಕ್ತದೊತ್ತಡದಲ್ಲಿ ಅತಿಯಾಗಿ ಏರಿಕೆಯಾಗಿ ಅವರು ಆಸ್ಪತ್ರೆಗೆ ದಾಖಲಾಗುವಂತಾಯಿತು.
ಆದರೆ, ಘಟನೆಯ ಕುರಿತಾಗಿ ಸುದ್ದಿ ಹರಡುತ್ತಿದ್ದಂತೆಯೇ ಮಹಾರಾಷ್ಟ್ರದ ರಾಜ್ಯ ವಿದ್ಯುತ್ ವಿತರಣಾ ನಿಗಮ (ಎಂಎಸ್ಇಡಿಎಲ್)ವು ತನಿಖೆ ನಡೆಸಿತು. ದೊಡ್ಡ ಮೊತ್ತದ ವಿದ್ಯುತ್ ಶುಲ್ಕ ಬಂದಿರುವುದಕ್ಕೆ ಬಿಲ್ಲಿಂಗ್ನಲ್ಲಿ ಆದ ಲೋಪವು ಕಾರಣವೆಂದು ಅದು ಸ್ಪಷ್ಟನೆ ನೀಡಿತು. ಆನಂತರ ಅಧಿಕಾರಿಗಳು ಗಣಪತ್ ನಾಯ್ಕೆ ಅವರ ಮನೆಯವರಿಗೆ ಸರಿಯಾದ ಬಿಲ್ ನೀಡಿದರು.
ಗಣಪತ್ ನಾಯ್ಕ್ ಈಗ ಚೇತರಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆಯೆಂದು ವರದಿಗಳು ತಿಳಿಸಿವೆ.
‘‘ ಮೊದಲಿಗೆ ನಾವು ಇಡೀ ಜಿಲ್ಲೆಯ ಬಿಲ್ನು ನಮಗೆ ಕಳುಹಿಸರಬೇಕೆಂದು ಭಾವಿಸಿದ್ದೆವು. ಆದರೆ ನಾವು ಬಿಲ್ ಅನ್ನು ಪರಿಶೀಲಿಸಿದಾಗ ಅದು ನಮ್ಮ ಬಿಲ್ ಮಾತ್ರವೇ ಆಗಿತ್ತೆಂಬುದು ಗೊತ್ತಾಯಿತು. ಆಗ ನಾವು ತುಂಬಾ ಗಾಬರಿಗೊಂಡೆವು. ಯಾಕೆಂದರೆ ಲಾಕ್ಡೌನ್ ಅವಧಿಯಲ್ಲಿ ಆದ ನಷ್ಟದಿಂದಾಗಿ ವಿದ್ಯುತ್ ನಿಗಮವು ಪ್ರತಿಯೊಬ್ಬರಿಂದಲೂ ಬಾಕಿ ಹಣವನ್ನು ವಸೂಲಿ ಮಾಡತೊಡಗಿತ್ತು’’ ಎಂದು ಗಣಪತ್ ನಾಯ್ಕ್ ಅವರ ಮೊಮ್ಮಗ ನೀರಜ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.







