ಮೂರನೇ ಟೆಸ್ಟ್ : ಭಾರತ 99/3, ರೋಹಿತ್ ಔಟಾಗದೆ 57

ಅಹಮದಾಬಾದ್: ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 99 ರನ್ ಗಳಿಸಿದೆ.
ಇಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಹಗಲು-ರಾತ್ರಿ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್-ಅಶ್ವಿನ್ ದಾಳಿಗೆ ತತ್ತರಿಸಿ ಕೇವಲ 112 ರನ್ ಗೆ ಆಲೌಟಾಯಿತು.
ಇಂಗ್ಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿ ಬ್ಯಾಟಿಂಗ್ ಆರಂಭಿಸಿದ ಭಾರತವು 33 ಓವರ್ ಗಳಲ್ಲಿ 99 ರನ್ ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿದೆ. ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ(ಔಟಾಗದೆ 57, 82 ಎಸೆತ, 9 ಬೌಂಡರಿ)ಅರ್ಧಶತಕ ದಾಖಲಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ(27)ಹಾಗೂ ಶುಭಮನ್ ಗಿಲ್(11)ಎರಡಂಕೆಯ ಸ್ಕೋರ್ ಗಳಿಸಿದರು.
ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಖಾತೆ ತೆರೆಯುವ ಮೊದಲೆ ವಿಕೆಟ್ ಒಪ್ಪಿಸಿದರು. ದಿನದಾಟದಂತ್ಯಕ್ಕೆ ರೋಹಿತ್ ಹಾಗೂ ಅಜಿಂಕ್ಯ ರಹಾನೆ ಕ್ರೀಸ್ ಕಾಯ್ದುಕೊಂಡಿದ್ದರು. ಇಂಗ್ಲೆಂಡ್ ಪರ ಜಾಕ್ ಲೀಚ್ (2-27)ಎರಡು ವಿಕೆಟ್ ಪಡೆದಿದ್ದಾರೆ.