ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು: ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಪೌರಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ಫೆ.24: ಬಿಬಿಎಂಪಿಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಬಿಬಿಎಂಪಿ ಪೌರಕಾರ್ಮಿಕರ ಸಂಘ(ಎಐಸಿಸಿಟಿಯು) ನೇತೃತ್ವದಲ್ಲಿ ಜಮಾಯಿಸಿದ ಪೌರಕಾರ್ಮಿಕರು, ಖಾಯಂ ಪೌರಕಾರ್ಮಿಕರಿಗೆ ನೀಡುತ್ತಿರುವ ಕೆಲಸದ ಭದ್ರತೆ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ರೂಪದಲ್ಲೇ ಎಲ್ಲ ಪೌರಕಾರ್ಮಿಕರಿಗೂ ಸಮಾನವಾಗಿ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಎಂ.ನಿರ್ಮಲಾ, ಬಿಬಿಎಂಪಿಯೂ ಈ ಕೂಡಲೇ ವಯೋಮಿತಿ ಪಡೆಯುವ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು. ದುಡಿಯುವ ವೇಳೆ ಮರಣ ಹೊಂದುವ ಕಾರ್ಮಿಕರ ಕುಟುಂಬಗಳಿಗೆ ಪರಿಹಾರದ ಜೊತೆಗೆ ಅನುಕಂಪ ನೇಮಕಾತಿ ಆಯ್ಕೆ ನೀಡಬೇಕೆಂದು ಅವರು ಆಗ್ರಹಿಸಿದರು.
ಎಲ್ಲ ರೀತಿಯ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು. ಅದೇ ರೀತಿ, ವಾಹನ ಚಾಲಕರು, ಸಹಾಯಕರನ್ನು ನೇರ ಪಾವತಿ ಸಂಭಾವನೆ ವ್ಯವಸ್ಥೆಯಡಿ ಸೇರಿಸಿ ತದನಂತರ ಅವರನ್ನೂ ಖಾಯಂಗೊಳಿಸಬೇಕು. ಅಷ್ಟೇ ಅಲ್ಲದೆ, ಪ್ರತಿ ಪೌರಕಾರ್ಮಿಕರಿಗೂ ರಾಷ್ಟ್ರೀಯ, ಧಾರ್ಮಿಕ, ವಾರದ ರಜೆಗಳನ್ನು ಕಡ್ಡಾಯವಾಗಿ ವೇತನ ಸಹಿತ ನೀಡಬೇಕೆಂದು ಆಗ್ರಹಿಸಿದರು.
ಬಹುಮುಖ್ಯವಾಗಿ ಕನಿಷ್ಠ ವೇತನದ ಹೆಚ್ಚಳ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನದ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಬಿಬಿಎಂಪಿ ಸಲ್ಲಿಸಿ, ಇತರೆ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಅವರು ಒತ್ತಾಯ ಮಾಡಿದರು.







