ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾದ ಅಹ್ಮದಾಬಾದ್ ಟೆಸ್ಟ್ ಪಂದ್ಯ

ಹೊಸದಿಲ್ಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಆತಿಥ್ಯವಹಿಸಿರುವ ಅಹ್ಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ದಿನದಾಟವಾದ ಬುಧವಾರ ಒಂದೇ ದಿನ 13 ವಿಕೆಟ್ ಗಳು ಪತನಗೊಂಡಿದ್ದು, ಈ ಮೂಲಕ ಈ ಪಂದ್ಯವು ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದೆ.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಕೇವಲ 112 ರನ್ ಗಳಿಗೆ ಆಲೌಟಾಯಿತು. ಭಾರತವು ಮೊಟೆರಾ ಸ್ಟೇಡಿಯಂನಲ್ಲಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ್ದು, ಮೊದಲ ದಿನದಾಟದಂತ್ಯಕ್ಕೆ ಸ್ಪಿನ್ನರ್ ಸ್ನೇಹಿ ಪಿಚ್ ನಲ್ಲಿ 99 ರನ್ ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿದೆ.
ಮೊಟೆರಾದಲ್ಲಿ ಮೊತ್ತ ಮೊದಲ ಅಂತರ್ ರಾಷ್ಟ್ರೀಯ ಹಗಲು-ರಾತ್ರಿ ಪಂದ್ಯದ ಮೊದಲ ದಿನದಾಟದಲ್ಲಿ ಒಟ್ಟು 13 ವಿಕೆಟ್ ಗಳು ಪತನವಾಗುವುದರೊಂದಿಗೆ ಒಂದೇ ದಿನ ಗರಿಷ್ಠ ವಿಕೆಟ್ ಪತನದ ಜಂಟಿ ದಾಖಲೆ ನಿರ್ಮಾಣವಾಗಿದೆ.
ಪಿಂಕ್ ಬಾಲ್ ಟೆಸ್ಟ್ ನಲ್ಲಿ 4 ಬಾರಿ ಈ ರೀತಿ ಆಗಿದ್ದರೂ ಅಹ್ಮದಾಬಾದ್ ಟೆಸ್ಟ್ ನ ಮೊದಲ ದಿನ ಕನಿಷ್ಠ ಸ್ಕೋರ್ ಗೆ 13 ವಿಕೆಟ್‍ಗಳು ಉರುಳಿವೆ.
ಇಂಗ್ಲೆಂಡ್ ಗಳಿಸಿರುವ 112 ರನ್ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದಾಖಲಾಗಿರುವ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಆತಿಥೇಯ ಭಾರತವು ಸ್ಪಿನ್‍ದ್ವಯರಾದ ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ನೆರವಿನಿಂದ ಸ್ಪಿನ್ ಸ್ನೇಹಿ ಪಿಚ್ ಲಾಭ ಪಡೆದಿದೆ. ಅಕ್ಷರ್ ಜೀವನಶ್ರೇಷ್ಟ 38 ರನ್ ಗೆ 6 ವಿಕೆಟ್‍ಗಳನ್ನು ಪಡೆದಿದ್ದಾರೆ. ಅಶ್ವಿನ್ 80ಕ್ಕೆ 3 ವಿಕೆಟ್‍ಗಳನ್ನು ಪಡೆದು ಇಂಗ್ಲೆಂಡ್ ತಂಡವನ್ನು 112 ರನ್ ಗೆ ಆಲೌಟ್ ಮಾಡಲು ನೆರವಾಗಿದ್ದಾರೆ.
13/211: ಇಂಗ್ಲೆಂಡ್(10)-ಭಾರತ(3)-ಅಹ್ಮದಾಬಾದ್- 2021
13/233: ಇಂಗ್ಲೆಂಡ್(10)-ನ್ಯೂಝಿಲ್ಯಾಂಡ್-ಆಕ್ಲಂಡ್-2018
13/280: ಬಾಂಗ್ಲಾದೇಶ(10)-ಭಾರತ(3)-ಕೋಲ್ಕತಾ- 2019
13/339:ದಕ್ಷಿಣ ಆಫ್ರಿಕಾ(9)-ಝಿಂಬಾಬ್ವೆ(4)-ಪೋರ್ಟ್ ಎಲಿಝಬೆತ್-2017