ವಿಜಯ ಹಝಾರೆ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಪೃಥ್ವಿ ಶಾ

ಮುಂಬೈ: ಮುಂಬೈ ಹಾಗೂ ಪುದುಚೇರಿ ನಡುವೆ ಗುರುವಾರ ನಡೆದ ವಿಜಯ ಹಝಾರೆ ಟ್ರೋಫಿಯ ಗ್ರೂಪ್ ಹಂತದ ಪಂದ್ಯದಲ್ಲಿ ಪೃಥ‍್ವಿ ಶಾ ಲಿಸ್ಟ್ 'ಎ' ಕ್ರಿಕೆಟ್ ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದರು. ಶಾ 142 ಎಸೆತಗಳಲ್ಲಿ 140.85ರ ಸ್ಟ್ರೈಕ್ ರೇಟ್ ನಲ್ಲಿ ದ್ವಿಶತಕ ಪೂರೈಸಿದರು. 21ರ ಹರೆಯದ ಶಾ ಅವರ ಮೋಹಕ ಇನಿಂಗ್ಸ್ ನಲ್ಲಿ 27 ಬೌಂಡರಿ ಹಾಗೂ 4 ಸಿಕ್ಸರ್ ಗಳಿವೆ.
ಶಾ ಅವರು ವಿಜಯ ಹಝಾರೆ ಟ್ರೋಫಿಯ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ 4ನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಶಾ ಲಿಸ್ಟ್ ಎ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಭಾರತದ 8ನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಶಾ ಔಟಾಗದೆ 227 ರನ್(152 ಎಸೆತ)ಗಳಿಸಿದ್ದು, ಇದು ವಿಜಯ ಹಝಾರೆ ಟ್ರೋಫಿಯಲ್ಲಿ ನಾಯಕನೊಬ್ಬ ಗಳಿಸಿರುವ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
ಶಾ ಮೊದಲ ಬಾರಿ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಶಾ ಗಳಿಸಿರುವ ಔಟಾಗದೆ 227 ರನ್ ವಿಜಯ ಹಝಾರೆ ಟ್ರೋಫಿಯ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಶಾ ಸಿಡಿಸಿರುವ ದ್ವಿಶತಕ ಹಾಗೂ ಸೂರ್ಯಕುಮಾರ್ ಯಾದವ್ 58 ಎಸೆತಗಳಲ್ಲಿ ಗಳಿಸಿದ್ದ 133 ರನ್ ನೆರವಿನಿಂದ ಮುಂಬೈ ತಂಡವು 4 ವಿಕೆಟ್ ಗಳ ನಷ್ಟಕ್ಕೆ 457 ರನ್ ಗಳಿಸಿದೆ.





