ಸ್ಥಳೀಯ ಪ್ಯಾಸೆಂಜರ್ ರೈಲುಗಳ ಪ್ರಯಾಣ ದರ ಹೆಚ್ಚಿಸಿದ ರೈಲ್ವೆ ಸಚಿವಾಲಯ

ಹೊಸದಿಲ್ಲಿ: ಕೋವಿಡ್-19 ಎರಡನೇ ಅಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಇನ್ನೂ ನಮ್ಮ ಸುತ್ತಮುತ್ತಲು ಇರುವ ಕಾರಣ ಅನಗತ್ಯ ಪ್ರಯಾಣವನ್ನು ತಡೆಯಲು ಅಲ್ಪ ದೂರದ ಸ್ಥಳೀಯ ರೈಲುಗಳ ದರವನ್ನು ಸ್ವಲ್ಪ ಹೆಚ್ಚಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಬುಧವಾರ ತಿಳಿಸಿದೆ.
ರೈಲು ದರ ಏರಿಕೆಯು ಉಪ ನಗರ ರೈಲುಗಳಿಗೆ ಅನ್ವಯಿಸುವುದಿಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಲಾಕ್ ಡೌನ್ ಸಡಿಲಿಕೆಯಾದ ಬಳಿಕ ರೈಲ್ವೆಸ್ ವಿಶೇಷ ರೈಲುಗಳನ್ನು ಮಾತ್ರ ಓಡಿಸುತ್ತಿದೆ. ದೂರ ಅಂತರಕ್ಕೆ ವಿಶೇಷ ರೈಲುಗಳನ್ನು ಆರಂಭಿಸಿದ್ದ ರೈಲ್ವೆಸ್ ಈಗ ಅಲ್ಪ ದೂರದ ಪ್ರಯಾಣಿಕರ ರೈಲುಗಳನ್ನು ಸಹ ವಿಶೇಷ ರೈಲುಗಳಾಗಿ ಓಡಿಸುತ್ತಿದೆ.
ಕೋವಿಡ್ -19 ದೃಷ್ಟಿಯಿಂದ ವಿಶೇಷ ನಿಬಂಧನೆಯಂತೆ ಅಲ್ಪ ದೂರ ಚಲಿಸುವ ಪ್ರಯಾಣಿಕರ ರೈಲುಗಳ ದರಗಳನ್ನು ಕಾಯ್ದಿರಿಸದ ಮೇಲ್/ಎಕ್ಸ್ ಪ್ರೆಸ್ ರೈಲುಗಳ ಟಿಕೆಟ್ ಗಳ ಬೆಲೆಗಳಿಗೆ ಸಮನಾಗಿ ನಿಗದಿಪಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಜನರನ್ನು ಅನಗತ್ಯ ಪ್ರಯಾಣದಿಂದ ದೂರ ಇರಿಸಲು ಪ್ರಯಾಣಿಕರ ಹಾಗೂ ಇತರ ಕಡಿಮೆ ಅಂತರದ ರೈಲುಗಳ ದರವನ್ನು ಸ್ವಲ್ಪ ಹೆಚ್ಚಿಸಲಾಗಿದೆ ಎಂದು ತಿಳಿಸಲು ರೈಲ್ವೇಸ್ ಬಯಸುತ್ತದೆ. ಕೋವಿಡ್ ಹಾವಳಿ ಇನ್ನೂ ನಮ್ಮ ಸುತ್ತಮುತ್ತಲಿದೆ. ರೈಲಿನಲ್ಲಿ ಜನ ಸಂದಣಿಯನ್ನುತಡೆಗಟ್ಟಲು ಹಾಗೂ ಕೋವಿಡ್ ಹರಡುವುದನ್ನು ನಿಲ್ಲಿಸಲು ರೈಲ್ವೆ ಸ್ವಲ್ಪ ಮಟ್ಟಿನ ದರವನ್ನು ಹೆಚ್ಚಿಸುತ್ತಿದೆ ಎಂದು ರೈಲ್ವೆ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.







