ಹರ್ಯಾಣ: ಬಾಲಕಿಗೆ ಡ್ರಗ್ಸ್ ನೀಡಿ ಐವರಿಂದ ಸಾಮೂಹಿಕ ಅತ್ಯಾಚಾರ

ಸಾಂದರ್ಭಿಕ ಚಿತ್ರ
ಕುರುಕ್ಷೇತ್ರ,ಫೆ.25: ಐವರು ಯುವಕರು 17ರ ಹರೆಯದ 12ನೇ ತರಗತಿಯ ವಿದ್ಯಾರ್ಥಿನಿ ಮಾದಕ ದ್ರವ್ಯ ಸೇವಿಸುವಂತೆ ಮಾಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಹರ್ಯಾಣದ ಕುರುಕ್ಷೇತ್ರ ಸಮೀಪದ ಗ್ರಾಮದಲ್ಲಿ ನಡೆದಿದೆ. ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಓರ್ವ ಸಂತ್ರಸ್ತೆಯ ಗೆಳತಿಯ ಸೋದರ ಸಂಬಂಧಿಯಾಗಿದ್ದಾನೆ.
ಬಂಧಿತರಲ್ಲಿ ಇಬ್ಬರು 18 ವರ್ಷದವರಾಗಿದ್ದು,ಬಾಲಾರೋಪಿಯಾಗಿರುವ ಇನ್ನೋರ್ವನನ್ನು ರಿಮಾಂಡ್ ಹೋಮ್ಗೆ ರವಾನಿಸಲಾಗಿದೆ.
ಫೆ.22ರಂದು ಶಾಲೆ ಬಿಟ್ಟ ಬಳಿಕ ಸಂತ್ರಸ್ತೆ ಗ್ರಾಮದಲ್ಲಿಯ ತನ್ನ ಗೆಳತಿಯ ಮನೆಗೆ ತೆರಳಿದ್ದಳು. ಅಲ್ಲಿ ಆಕೆಗೆ ತಲೆ ಸುತ್ತಿದಂತಾದಾಗ ತನ್ನ ಸೋದರ ಸಂಬಂಧಿ ವಾಹನದಲ್ಲಿ ಮನೆಗೆ ಬಿಡುತ್ತಾನೆ ಎಂದು ಗೆಳತಿ ತಿಳಿಸಿದ್ದಳು. ಆದರೆ ಆತ ಸಂತ್ರಸ್ತೆಯನ್ನು ಉಮ್ರಿ ಚೌಕ್ ಸಮೀಪದ ಪ್ರದೇಶವೊಂದಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಬಾಲಕಿಗೆ ಮಾದಕ ದ್ರವ್ಯವನ್ನೂ ನೀಡಿದ್ದರು ಎಂದು ಪೊಲೀಸರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಸಂತ್ರಸ್ತೆಯ ತಂದೆ ನೀಡಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಕುರುಕ್ಷೇತ್ರ ಎಸ್ಪಿ ಹಿಮಾಂಶು ಗರ್ಗ್ ತಿಳಿಸಿದರು.







