'ನಿಟ್ಟೂರು ಒಳಚರಂಡಿ ಕಾಮಗಾರಿ ದುರಸ್ತಿಗೆ ವಾರದ ಗಡುವು'
ಉಡುಪಿ ನಗರಸಭೆ ಸದಸ್ಯನಿಂದ ತ್ಯಾಜ್ಯ ನೀರಿನಲ್ಲಿ ಸ್ನಾನ ಮಾಡುವ ಎಚ್ಚರಿಕೆ

ಉಡುಪಿ, ಫೆ.26: ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66ರ ಒಳಚರಂಡಿ ಕಾಮ ಗಾರಿಗೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಒಂದು ವಾರ ದೊಳಗೆ ಕಾಮಗಾರಿ ಆರಂಭಿಸಿವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಕೆಲಸ ಆರಂಭಿಸದಿದ್ದರೆ ನಾವೇ ಆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ವಿಜಯ ಕೊಡವೂರು, ಕಾಮಗಾರಿ ನಡೆಸದ ಪರಿಣಾಮ ಇಂದ್ರಾಣಿ ನದಿಯ ತ್ಯಾಜ್ಯ ನೀರಿನ ದುವಾರ್ಸನೆಯಿಂದ ನಾಲ್ಕೈದು ವಾರ್ಡ್‌ಗಳಲ್ಲಿ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ನಗರಸಭೆಯೇ ಕಾರಣ. ವಾರದೊಳಗೆ ದುರಸ್ತಿ ಮಾಡದಿದ್ದರೆ ಮುಂದಿನ ಸಭೆಗೆ ನಾನು ಆ ಮಲೀನ ನೀರಿನಲ್ಲಿ ಸ್ನಾನ ಮಾಡಿ ಬಂದು ಕುಳಿತು ಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಅಲೆವೂರಿನಲ್ಲಿರುವ ಘನತ್ಯಾಜ್ಯ ಘಟಕದಲ್ಲಿ ದಿನಕ್ಕೆ 25-30 ಟನ್ ಹಸಿ ತ್ಯಾಜ್ಯ ಬರುತ್ತಿದ್ದು, ಇದನ್ನು ವಿಂಡೋ ಕಾಂಪೋಸ್ಟ್ ವಿಧಾನದಿಂದ ಗೊಬ್ಬರ ವಾಗಿ ಪರಿವರ್ತಿಸಲಾಗುತ್ತಿದೆ. ಇದಕ್ಕೆ ರೈತರಿಗೆ, ಜನರಿಗೆ ಹೊರೆಯಾಗದಂತೆ ದರವನ್ನು ನಿಗದಿಪಡಿಸಲಾಗುವುದು. ಈ ಗೊಬ್ಬರಕ್ಕೆ ಬೇಡಿಕೆ ಇದ್ದು, ಈಗಾಗಲೇ ಉಚಿತವಾಗಿ 124ಟನ್ ಗೊಬ್ಬರ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಶುಲ್ಕ ಇಳಿಕೆಗೆ ಪಟ್ಟು: 2014ರಲ್ಲಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ ಶುಲ್ಕ ವಾರ್ಷಿಕ ಗರಿಷ್ಠ ಮಿತಿ 500ರೂ.ವನ್ನು ರದ್ದು ಪಡಿಸಿ ಏರಿಕೆ ಮಾಡಲಾಗಿದ್ದು, ಈ ಶುಲ್ಕವನ್ನು ಇಳಿಕೆ ಮಾಡುವಂತೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
ಸದಸ್ಯ ಕೃಷ್ಣರಾವ್ ಕೊಡಂಚ ಮಾತನಾಡಿ, ಈ ಹಿಂದಿನವರು 2014-20ರ ವರೆಗೆ ಕಾನೂನು ಬಾಹಿರವಾಗಿ ಹೆಚ್ಚಿನ ಶುಲ್ಕವನ್ನು ವ್ಯಾಪಾರ ಸ್ಥರಿಂದ ವಸೂಲಿ ಮಾಡಿದ್ದಾರೆ. ನಾವು ಇದರ ವಿರುದ್ಧ ಹೋರಾಟ ಮಾಡಿದ್ದು, ಅಧಿಕಾರಕ್ಕೆ ಬಂದರೆ ಶುಲ್ಕ ಇಳಿಕೆ ಮಾಡುವುದಾಗಿ ಭರವಸೆ ನೀಡಿದ್ದೇವೆ. ಅದರಂತೆ ಮುಂದಿನ ಎಪ್ರಿಲ್ ತಿಂಗಳಲ್ಲಿ 2014ರಲ್ಲಿದ್ದ ಶುಲ್ಕವನ್ನೇ ಡೆಯಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ನಗರಸಭೆ ಅಧಿಕಾರಿಗಳು, ನಗರಸಭೆ ಆದಾಯ ಹೆಚ್ಚಿ ಸಲು ಶುಲ್ಕ ಏರಿಕೆ ಅನಿವಾರ್ಯವಾಗಿದೆ. ಈ ಹಿಂದೆ ಗರಿಷ್ಠ ಮೊತ್ತ 500ರೂ. ಇತ್ತು. ಈಗ ಇರುವ ದೊಡ್ಡ ದೊಡ್ಡ ಉದ್ಯಮಗಳಿಗೆ ಅಷ್ಟು ಸಣ್ಣ ಮೊತ್ತ ವಿಧಿ ಸುವುದು ಸರಿಯಲ್ಲ ಎಂದರು. ಈ ಹಿಂದೆ ಮಾಡಿರುವುದು ತಪ್ಪು ಆಗಿದ್ದರೆ ಈಗ ನೀವು ಸರಿ ಮಾಡಿ, ಶುಲ್ಕವನ್ನು ಇಳಿಸಿ ಎಂದು ವಿಪಕ್ಷ ನಾಯಕ ರಮೇಶ್ ಕಾಂಚನ್ ತಿಳಿಸಿದರು. ಶುಲ್ಕ ಇಳಿಕೆ ಮಾಡುವ ವಿಚಾರವನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಬಿಲ್‌ನಲ್ಲಿ ಗೋಲ್‌ಮಾಲ್: ಜಿಲ್ಲಾಡಳಿತದ ವತಿಯಿಂದ ನಡೆಯುವ ಗಣ್ಯರಾಜ್ಯೋತ್ಸವ ಕಾರ್ಯಕ್ರಮದ ಶಾಮಿಯಾನ, ಲೈಟಿಂಗ್, ವೇದಿಕೆ, ಅಲಂಕಾರಕ್ಕೆ ಒಟ್ಟು 2.11ಲಕ್ಷ ರೂ. ಬಿಲ್ ಆಗಿದ್ದು, ಇದಕ್ಕೆ ನಗರಸಭೆಯಿಂದ ಟೆಂಡರ್ ಕರೆದು ಬಿಲ್ ಪಾವತಿ ಮಾಡು ವುದು ಸರಿಯಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸದಸ್ಯ ಗಿರೀಶ್ ಕಾಂಚನ್ ಮಾತನಾಡಿ, ಇದೆಲ್ಲ ಗೋಲ್‌ಮಾಲ್ ಟೆಂಡರ್ ಆಗಿದ್ದು, ಮುಂದೆ ಇದಕ್ಕೆ ನಗರಸಭೆ ತಲೆ ಕೊಡಬೇಕಾದೀತು. ಆದುದರಿಂದ ನಮ್ಮದಲ್ಲದ ಕಾರ್ಯಕ್ರಮಕ್ಕೆ ಟೆಂಡರ್ ಕರೆದು ಪೂರ್ಣ ಬಿಲ್ ಪಾವತಿಸುವ ಬದಲು ಆ ಕಾರ್ಯಕ್ರಮಕ್ಕೆ ಇಂತಿಷ್ಟು ನಿಧಿ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಟ್ಟಡಗಳ ಪಾರ್ಕಿಂಗ್ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳು ಮತ್ತು ಫುಟ್ ಪಾತ್‌ಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳ ತೆರವುಗೊಳಿಸಲು ನೋಟೀಸ್ ಜಾರಿ ಮಾಡಬೇಕು. ತೆರವು ಮಾಡದಿದ್ದರೆ ಎಪ್ರಿಲ್ ತಿಂಗಳಲ್ಲಿ ನಗರಸಭೆಯಿಂದಲೇ ಕಾರ್ಯಾಚರಣೆ ಮಾಡಬೇಕು ಎಂದು ಸದಸ್ಯ ಗಿರೀಶ್ ಕಾಂನ್ ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಉದಯ ಕುಮಾರ್ ಉಪಸ್ಥಿತರಿದ್ದರು.
ಬೀದಿನಾಯಿಗಳ ಕಾಟ: ಬಾಲಕ ಬಲಿ
ನಗರದಲ್ಲಿ ನಾಯಿಗಳ ಕಾಟ ವಿಪರೀತವಾಗಿದ್ದು, ಒಂದೂವರೆ ತಿಂಗಳ ಹಿಂದೆ ಕರಂಬಳ್ಳಿಯಲ್ಲಿ 11ವರ್ಷದ ಬಾಲಕನೋರ್ವ ಹುಚ್ಚು ನಾಯಿ ಕಡಿತಕ್ಕೆ ಬಲಿಯಾಗಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ಪ್ರಸ್ತಾಪಿಸಿದರು.
ಸದಸ್ಯ ವಿಜಯ ಕೊಡವೂರು ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳ ಮಗುವನ್ನು ಕೂಡ ನಾಯಿ ಅಟ್ಟಿಸಿಕೊಂಡು ಹೋಗಿರುವುದನ್ನು ನೋಡಿ ದ್ದೇನೆ. ಆದುದರಿಂದ ಬೀದಿನಾಯಿಗಳ ವಿರುದ್ಧ ಕ್ರಮ ಜರಿಗಸಬೇಕು ಎಂದರು. ಈ ಬಗ್ಗೆ ನಾಯಿಗಳ ಸಂತಾನಹರಣಕ್ಕೆ ಬರುವ ತಂಡದೊಂದಿಗೆ ಆಯಾ ವಾರ್ಡಿನ ಸದಸ್ಯರು ಸಹಕರಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.








