ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ ಎ+ ಗ್ರೇಡ್ ಮಾನ್ಯತೆ

ಮಂಗಳೂರು : ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಇಸಿ) ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ಎನ್‌ಎಎಸಿ) 5 ವರ್ಷಗಳಿಗೆ ಅನ್ವಯವಾಗುವಂತೆ ಪ್ರತಿಷ್ಠಿತ ಎ+ ಗ್ರೇಡ್‌ನೊಂದಿಗೆ ಮಾನ್ಯತೆ ನೀಡಿದೆ.
ಕಾಲೇಜಿನಲ್ಲಿ ಶುಕ್ರವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ರಿಯೊ ಡಿಸೋಜ, ನಾಲ್ಕು ಪಾಯಿಂಟ್ ಸ್ಕೇಲ್‌ನಲ್ಲಿ 3.39ರ ಸಿಜಿಪಿಎಯೊಂದಿಗೆ, ಎಸ್‌ಜೆಇಸಿ ತನ್ನ ಮೊದಲ ಯತ್ನದಲ್ಲಿ ನ್ಯಾಕ್‌ನಿಂದ ಎ+ ಗ್ರೇಡ್‌ನೊಂದಿಗೆ ಮಾನ್ಯತೆ ಪಡೆದ ಉತ್ಕೃಷ್ಟ ಕಾಲೇಜುಗಳ ಸಾಲಿಗೆ ಸೇರಿಕೊಂಡಿದೆ ಎಂದರು.
ನ್ಯಾಕ್ ತಜ್ಞರ ತಂಡವು ಫೆ.15-16ರಂದು ಕಾಲೇಜಿಗೆ ಭೇಟಿ ನೀಡಿ ಕಟ್ಟುನಿಟ್ಟಿನ ಮೌಲ್ಯಮಾಪನ ನಡೆಸಿತ್ತು. ಈ ಸಂದರ್ಭದಲ್ಲಿ ನ್ಯಾಕ್ ತಂಡವು ಕಾಲೇಜಿನ ಮೂಲಸೌಕರ್ಯ, ನಿರ್ವಹಣೆ, ಅಧ್ಯಾಪಕರು, ವಿದ್ಯಾರ್ಥಿಗಳ ಕೊಡುಗೆಗಳು, ಬೋಧನೆ- ಕಲಿಕೆಯ ಪ್ರಕ್ರಿಯೆ, ಸಾಂಸ್ಥಿಕ ಮೌಲ್ಯಗಳು ಮತ್ತು ಅತ್ಯುತ್ತಮ ಪ್ರಾಕ್ಟೀಸ್‌ಗಳನ್ನು ಶ್ಲಾಘಿಸಿತ್ತು ಎಂದು ಮಾಹಿತಿ ನೀಡಿದರು.
ಭಾರತದ ಶೇ.5ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಮಾತ್ರ ನ್ಯಾಕ್‌ನಿಂದ ಎ+ ಅಥವಾ ಹೆಚ್ಚಿನ ಶ್ರೇಣಿಗಳನ್ನು ಪಡೆದಿದ್ದು, ಅದರಲ್ಲಿ ಸೈಂಟ್ ಜೋಸೆಫ್ ಕಾಲೇಜು ಕೂಡಾ ಸೇರಿರುವುದು ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿದೆ ಎಂದು ವಿವರಿಸಿದರು.
ಕಾಲೇಜು ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿದೆ ಹಾಗೂ ನ್ಯಾಕ್ ಮಾನ್ಯತೆಯು ಈ ಅಂಶಕ್ಕೆ ಪೂರಕವಾಗಿದೆ. ತನ್ನ ಧ್ಯೇಯವಾಕ್ಯವಾದ ಸೇವೆ ಮತ್ತು ಶ್ರೇಷ್ಠತೆಗೆ ಅನುಗುಣವಾಗಿ ಕಾಲೇಜಿನ ಕಠಿಣ ಪರಿಶ್ರಮದಿಂದಾಗಿ ಈ ಮಾನ್ಯತೆ ದೊರೆತಿದೆ. ಮಾನ್ಯತೆ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಶೇ. 70ರಷ್ಟು ಮೌಲ್ಯಮಾಪನವು ಸಂಸ್ಥೆಯು ಸಲ್ಲಿಸಿದ ಡಿಜಿಟಲ್ ದತ್ತಾಂಶವನ್ನು ಆಧರಿಸಿದೆ ಎಂದರು.
ಫಲಿತಾಂಶ-ಆಧಾರಿತ ಶಿಕ್ಷಣ (ಒಬಿಇ) ದಿಂದಾಗಿ ಕಾಲೇಜು ಈಗಾಗಲೇ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (ಎನ್‌ಬಿಎ) ನಿಂದ ತನ್ನ 4 ಇಂಜಿನಿಯರಿಂಗ್ ವಿಭಾಗಗಳಿಗೆ ಸತತ 3 ಬಾರಿ ಮಾನ್ಯತೆ ಪಡೆದಿದ್ದು, ಈ ಮಾನ್ಯತೆಯು 2022 ಜೂನ್‌ವರೆಗೆ ಚಾಲ್ತಿಯಲ್ಲಿರುತ್ತದೆ.
19 ವರ್ಷಗಳ ಇತಿಹಾಸ ಇರುವ ಕಾಲೇಜಿನಲ್ಲಿ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ವಚ್ಛ, ಹಸಿರು ಮತ್ತು ಸ್ಮಾರ್ಟ್ ಕ್ಯಾಂಪಸ್ ಹೊಂದಿದ್ದು, ಕರಾವಳಿ ಭಾಗದ ಇಂಜಿನಿಯರಿಂಗ್ ಆಕಾಂಕ್ಷಿಗಳ ನೆಚ್ಚಿನ ತಾಣವಾಗಿದೆ. ಉತ್ತಮ ಮೂಲ ಸೌಕರ್ಯ, ಶೈಕ್ಷಣಿಕ ವಾತಾವರಣ, ಕ್ಯಾಂಪಸ್‌ನಲ್ಲಿ ಶಿಸ್ತು, ಅತ್ಯುತ್ತಮ ಉದ್ಯೋಗಾವಕಾಶಗಳು, ಇಂಕ್ಯುಬೇಶನ್ ಸೌಲಭ್ಯಗಳು, ಉದ್ಯಮಶೀಲತೆ ಮತ್ತು ನಾವೀನ್ಯತೆಗೆ ಬೆಂಬಲ, ಸಮರ್ಥ ಅಧ್ಯಾಪಕರು ಮತ್ತು ತಾಂತ್ರಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ನಿರ್ದೇಶಕ ವಂ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಸಹಾಯಕ ನಿರ್ದೇಶಕರಾದ ವಂ.ಆಲ್ವಿನ್ ಡಿಸೋಜ ಮತ್ತು ವಂ.ರೋಹಿತ್ ಡಿಕೋಸ್ತಾ, ಆಂತರಿಕ ಗುಣಮಟ್ಟ ಮೌಲ್ಯಮಾಪನ ಸಮಿತಿ (ಐಕ್ಯೂಎಸಿ) ಸಂಯೋಜಕ ಡಾ.ಶ್ರೀರಂಗ ಭಟ್, ನ್ಯಾಕ್ ಸಮಿತಿ ಸಂಯೋಜಕ ಪವನ್ ಕುಮಾರ್, ಎಚ್.ಆರ್. ಮ್ಯಾನೇಜರ್ ರಾಕೇಶ್ ಲೋಬೊ ಉಪಸ್ಥಿತರಿದ್ದರು.











