ವಿಶ್ವಸಂಸ್ಥೆಯಲ್ಲಿ ಲಂಕಾದ ಮಾನವಹಕ್ಕು ದಾಖಲೆಗಳನ್ನು ಸಮರ್ಥಿಸಿದ ಚೀನಾ

ಬೀಜಿಂಗ್ (ಚೀನಾ), ಫೆ. 27: ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಸಂಕಟಕ್ಕೆ ಸಿಲುಕಿರುವ ಶ್ರೀಲಂಕಾದ ನೆರವಿಗೆ ಚೀನಾ ಶುಕ್ರವಾರ ಧಾವಿಸಿದೆ.
ಶ್ರೀಲಂಕಾದಲ್ಲಿ ನೆಲೆಸಿರುವ ಮಾನವಹಕ್ಕು ಪರಿಸ್ಥಿತಿ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸುವ ನಿರ್ಣಯವೊಂದು ಅಂಗೀಕಾರಗೊಳ್ಳುವ ಸಾಧ್ಯತೆಯನ್ನು ಆ ದೇಶ ಎದುರಿಸುತ್ತಿದೆ. ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಲು ಮಾನವಹಕ್ಕು ವಿಷಯಗಳನ್ನು ಬಳಸುವುದನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ.
ಶ್ರೀಲಂಕಾದ ಮಾನವಹಕ್ಕುಗಳ ಉಲ್ಲಂಘನೆಗೆ ಉತ್ತರದಾಯಿತ್ವ ಮತ್ತು ಪರಿಹಾರ ನಿಗದಿ ಕುರಿತ ನಿರ್ಣಯವನ್ನು ತಿರಸ್ಕರಿಸುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯ ಸದಸ್ಯ ದೇಶಗಳಿಗೆ ಶ್ರೀಲಂಕಾದ ವಿದೇಶ ಸಚಿವ ದಿನೇಶ್ ಗುಣವರ್ದನ ಮನವಿ ಮಾಡಿದ ಮೂರು ದಿನಗಳ ಬಳಿಕ, ಚೀನಾ ಶ್ರೀಲಂಕಾಕ್ಕೆ ತನ್ನ ಬೆಂಬಲವನ್ನು ಘೋಷಿಸಿದೆ.
ಎಲ್ಟಿಟಿಇ ವಿರುದ್ಧದ ಸಶಸ್ತ್ರ ಸಂಘರ್ಷದ ಅಂತಿಮ ಹಂತದ ವೇಳೆ, 2009ರಲ್ಲಿ ನಡೆದ ಮಾನವಹಕ್ಕುಗಳ ಉಲ್ಲಂಘನೆಗಳಿಗೆ ಕಾರಣರಾದವರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುವುದು ಮತ್ತು ಅವರನ್ನು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಙಳ ಕಮಿಶನರ್ ಮಿಶೆಲ್ ಬ್ಯಾಚಲೆಟ್‌ರ ವರದಿ ಕರೆ ನೀಡಿತ್ತು.





