ಸಮುದ್ರದಲ್ಲಿ ತೇಲುತ್ತಿರುವ ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡುವ ಬದ್ಧತೆ ನಮ್ಮ ದೇಶಕ್ಕಿಲ್ಲ
ಬಾಂಗ್ಲಾದೇಶ ವಿದೇಶ ಸಚಿವ

ಢಾಕಾ (ಬಾಂಗ್ಲಾದೇಶ), ಫೆ. 27: ಅಂಡಮಾನ್ ಸಮುದ್ರದಲ್ಲಿ ಎರಡು ವಾರಗಳಿಂದ ಅತಂತ್ರ ಸ್ಥಿತಿಯಲ್ಲಿ ತೇಲುತ್ತಿರುವ 81 ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರಿಗೆ ಆಶ್ರಯ ನೀಡುವ ಯಾವುದೇ ಬದ್ಧತೆ ಬಾಂಗ್ಲಾದೇಶಕ್ಕಿಲ್ಲ ಎಂದು ಆ ದೇಶದ ವಿದೇಶ ಸಚಿವ ಎ.ಕೆ. ಅಬ್ದುಲ್ ಮುಮೆನ್ ಹೇಳಿದ್ದಾರೆ.
ಮೀನುಗಾರಿಕಾ ದೋಣಿಯೊಂದರಲ್ಲಿ ತೇಲುತ್ತಿದ್ದ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರನ್ನು ಭಾರತೀಯ ತಟರಕ್ಷಣಾ ಪಡೆ ಪತ್ತೆಹಚ್ಚಿದೆ ಹಾಗೂ ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂಬುದಾಗಿ ಭಾರತೀಯ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ದೋಣಿಯಲ್ಲಿ 8 ಮಂದಿಯ ಮೃತದೇಹಗಳೂ ಪತ್ತೆಯಾಗಿವೆ.
ಭಾರತವು ನಿರಾಶ್ರಿತರಿಗೆ ಆಹಾರ ಮತ್ತು ನೀರನ್ನು ನೀಡಿದೆ. ಆದರೆ, ಅವರನ್ನು ತೀರಕ್ಕೆ ಕರೆದೊಯ್ಯುವ ಯೋಜನೆಯನ್ನು ಹೊಂದಿಲ್ಲ.
ನಿರಾಶ್ರಿತರಿಗೆ ಸಮೀಪದಲ್ಲಿರುವ ದೇಶವಾಗಿರುವ ಭಾರತ ಅಥವಾ ರೊಹಿಂಗ್ಯಾರ ದೇಶವಾಗಿರುವ ಮ್ಯಾನ್ಮಾರ್ ಅವರಿಗೆ ಆಶ್ರಯ ಕೊಡಬೇಕೆಂದು ಬಾಂಗ್ಲಾದೇಶ ನಿರೀಕ್ಷಿಸುತ್ತಿದೆ ಎಂದು ಶುಕ್ರವಾರ ರಾತ್ರಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮುಮೆನ್ ಹೇಳಿದರು.





