ಮನೆಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆ ನಿಲ್ಲಿಸಿ: ಇಸ್ರೇಲ್‌ಗೆ ವಿಶ್ವಸಂಸ್ಥೆ, ಐರೋಪ್ಯ ದೇಶಗಳ ಕರೆ

ವಿಶ್ವಸಂಸ್ಥೆ, ಫೆ. 27: ಜೋರ್ಡಾನ್ ಕಣಿವೆಯ ಬೆಡೂಯಿನ್‌ನಲ್ಲಿರುವ ಮನೆಗಳನ್ನು ಕೆಡಹುವುದನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ಯುರೋಪಿಯನ್ ಸದಸ್ಯರು ಶುಕ್ರವಾರ ಇಸ್ರೇಲ್‌ಗೆ ಕರೆ ನೀಡಿದ್ದಾರೆ. ಅದೇ ವೇಳೆ, ಹಮ್ಸ ಅಲ್-ಬಕಯದಲ್ಲಿ ವಾಸಿಸುತ್ತಿರುವ ಜನರಿಗೆ ಮಾನವೀಯ ನೆರವು ಒದಗಿಸುವಂತೆಯೂ ಮನವಿ ಮಾಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿ ಭದ್ರತಾ ಮಂಡಳಿಯಲ್ಲಿ ನಡೆದ ಮಾಸಿಕ ಅಧಿವೇಶನದ ಕೊನೆಯಲ್ಲಿ ನೀಡಿದ ಜಂಟಿ ಹೇಳಿಕೆಯೊಂದರಲ್ಲಿ, ಎಸ್ಟೋನಿಯ, ಫ್ರಾನ್ಸ್, ಐರ್‌ಲ್ಯಾಂಡ್, ನಾರ್ವೆ ಮತ್ತು ಬ್ರಿಟನ್ ಈ ಮನವಿ ಮಾಡಿವೆ.
‘‘ಜೋರ್ಡಾನ್ ಕಣಿವೆಯಲ್ಲಿರುವ ಹಮ್ಸ ಅಲ್-ಬಕಯದಲ್ಲಿ ಇಸ್ರೇಲ್ ಅಧಿಕಾರಿಗಳು ಮನೆಗಳನ್ನು ಧ್ವಂಸಗೊಳಿಸುವ ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಐರೋಪ್ಯ ಒಕ್ಕೂಟ ಮತ್ತು ಇತರ ದಾನಿಗಳು ಕಟ್ಟಿರುವ ಮನೆಯನ್ನೂ ಧ್ವಂಸಗೊಳಿಸಲಾಗುತ್ತಿದೆ. ಇದು ನಮ್ಮ ತೀವ್ರ ಕಳವಳಕ್ಕೆ ಕಾರಣವಾಗಿದೆ’’ ಎಂದು ಹೇಳಿಕೆ ತಿಳಿಸಿದೆ.





