ನೈಜೀರಿಯ: ಅಪಹೃತ 42 ಮಂದಿಯ ಬಿಡುಗಡೆ
ಅಬುಜ (ನೈಜೀರಿಯ), ಫೆ. 27: ನೈಜೀರಿಯದ ನೈಜರ್ ರಾಜ್ಯದಲ್ಲಿ ಕಳೆದ ವಾರ ವಸತಿ ಶಾಲೆಯೊಂದರಿಂದ ಅಪಹರಣಗೊಂಡಿದ್ದ 27 ವಿದ್ಯಾರ್ಥಿಗಳು ಸೇರಿದಂತೆ 42 ಮಂದಿಯನ್ನು ಬಂದೂಕುಧಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ರಾಜ್ಯದ ಗವರ್ನರ್ ಹೇಳಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಬಂದೂಕುಧಾರಿಗಳು ದೇಶದ ಝಂಫರ ರಾಜ್ಯದಲ್ಲಿ ವಸತಿ ಶಾಲೆಯೊಂದರಿಂದ 300ಕ್ಕೂ ಅಧಿಕ ಬಾಲಕಿಯರನ್ನು ಅಪಹರಿಸಿದ ಒಂದು ದಿನದ ಬಳಿಕ, ಮೊದಲು ಅಪಹರಣಗೊಂಡವರನ್ನು ಬಿಡುಗಡೆ ಮಾಡಲಾಗಿದೆ.
ಉತ್ತರ ನೈಜೀರಿಯದ ರಾಜ್ಯಗಳಲ್ಲಿ ಸಶಸ್ತ್ರ ಗುಂಪುಗಳು ಹಣಕ್ಕಾಗಿ ಜನರನ್ನು ಅಪಹರಣ ಮಾಡುವುದು ಸಾಮಾನ್ಯವಾಗಿದೆ.
ನೈಜರ್ ರಾಜ್ಯದ ಸರಕಾರ, ನೈಜೀರಿಯ ಸರಕಾರ ಮತ್ತು ಸಶಸ್ತ್ರ ಪಡೆಗಳ ನಡುವೆ ಹಲವು ದಿನಗಳ ಕಾಲ ನಡೆದ ಮಾತುಕತೆಗಳ ಬಳಿಕ ಅಪಹೃತರ ಬಿಡುಗಡೆ ನಡೆದಿದೆ.
ಅಪಹರಣಕಾರರಿಗೆ ಒತ್ತೆಹಣ ನೀಡಲಾಗಿದೆಯೇ ಎಂಬ ಬಗ್ಗೆ ಸರಕಾರ ಏನೂ ಹೇಳಿಲ್ಲ.
Next Story





