ರಾಜ್ಯಾದ್ಯಂತ ಬಿಗಿ ಭದ್ರತೆಯಿಂದ ನಡೆದ ಎಫ್‍ಡಿಎ ಪರೀಕ್ಷೆ
ನಕಲು ಆರೋಪ: ಅಭ್ಯರ್ಥಿ ಪೊಲೀಸ್ ವಶಕ್ಕೆ
ಬೆಂಗಳೂರು, ಫೆ. 28: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಂದೂಡಲಾಗಿದ್ದ ಪ್ರಥಮ ದರ್ಜೆ ಸಹಾಯಕರು (ಎಫ್‍ಡಿಎ) ಹುದ್ದೆಗಳ ಪರೀಕ್ಷೆ ಇಂದು(ಫೆ.28) ರಾಜ್ಯಾದ್ಯಂತ ಬಿಗಿ ಭದ್ರತೆಯಿಂದ ನಡೆಯಿತು.
ರಾಜ್ಯಾದ್ಯಂತ ಸುಮಾರು 1,054 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 1,253 ಹುದ್ದೆಗಳಿಗೆ ಒಟ್ಟು 3.57ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಹೀಗಾಗಲೇ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಜುಗರಕ್ಕೆ ಒಳಗಾಗಿದ್ದ ಕೆಪಿಎಸ್ಸಿ, ಯುಪಿಎಸ್ಸಿ ಮಾದರಿಯಲ್ಲಿ ಮೂರು ಹಂತದಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಿಕೊಂಡು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ಬೆಂಗಳೂರು ನಗರದ ಶೇಷಾದ್ರಿಪುರಂ, ಆರ್‍ಸಿ ಕಾಲೇಜು ಒಳಗೊಂಡಂತೆ 78 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಭ್ಯರ್ಥಿಗಳು ಕೋವಿಡ್ ಮಾರ್ಗಸೂಚಿಯಂತೆ ಸ್ಯಾನಿಟೈಸ್, ಮಾಸ್ಕ್ ಹಾಗೂ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಪರೀಕ್ಷೆ ಬರೆದಿದ್ದಾರೆ.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಮೈಕ್ರೋಚಿಪ್, ಬ್ಲೂಟೂಥ್, ವೈಫೈ ಸೇರಿದಂತೆರ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತರುವುದನ್ನು ನಿಷೇಧಿಸಲಾಗಿತ್ತು.
ಅಭ್ಯರ್ಥಿಗಳ ಆಕ್ರೋಶ: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಂದೂಡಲಾಗಿದ್ದ ಎಫ್‍ಡಿಎ ಪರೀಕ್ಷೆಗೆ ಹೊಸ ಪ್ರವೇಶ ಪತ್ರವನ್ನು ಕೆಪಿಎಸ್ಸಿ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಪರೀಕ್ಷಾ ಕೊಠಡಿಗೆ ಹಾಜರಾಗಬೇಕೆಂದು ಕಡ್ಡಾಯಗೊಳಿಸಲಾಗಿತ್ತು. ಇದರಿಂದ ಕೆಲವು ಅಭ್ಯರ್ಥಿಗಳು ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಯಾರೋ ಮಾಡಿದ ತಪ್ಪಿಗೆ ನಮಗೆ ಇಲ್ಲಸಲ್ಲದ ನಿಯಮಗಳನ್ನು ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲವೆಂದು ಅವಕಾಶ ವಂಚಿತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಅಭ್ಯರ್ಥಿಗಳು ತಾವು ಬರೆಯಬೇಕಾದ ಪರೀಕ್ಷಾ ಕೊಠಡಿಗಳನ್ನು ಹುಡುಕುವುದಕ್ಕೆ ಸಮಯ ಕಳೆದು ಪರೀಕ್ಷೆಯಿಂದ ವಂಚಿತವಾಗಿರುವ ಘಟನೆ ಬೆಂಗಳೂರಿನ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ಕಳೆದ ಹಲವು ವರ್ಷಗಳಿಂದ ಎಫ್‍ಡಿಎ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದೆವು. ಆದರೆ, ಪರೀಕ್ಷಾ ಕೇಂದ್ರದ ಮಾಹಿತಿ ಸಿಗದ ಪರೀಕ್ಷೆ ಬರೆಯಲು ಸಾಧ್ಯವಾಗದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಕಲು ಆರೋಪ: ಇಂದು ನಡೆದ ಪ್ರಥಮ ದರ್ಜೆ ಸಹಾಯಕ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ನಕಲು ನಡೆದಿರುವ ಆರೋಪಗಳು ಕೇಳಿ ಬಂದಿವೆ. ವಿಜಯಪುರ ನಗರದ ಎಸ್.ಎಸ್. ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬರಿಗೆ ಬ್ಲಾಕ್ ನಂ.16ರ ಕೀ ಉತ್ತರವನ್ನು ಹೈಸ್ಕೂಲ್ ಸಿಬ್ಬಂದಿಯೊಬ್ಬರು ಹೇಳಿಕೊಟ್ಟಿರುವುದನ್ನು ವಿದ್ಯಾರ್ಥಿಗಳು ಪತ್ತೆ ಹಚ್ಚಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಗೊತ್ತಾಗಿದೆ.







