ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕೋವಿಡ್ ಕೇಸ್ ಹೆಚ್ಚಳ: ಕೇಂದ್ರ

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಪರಿಸ್ಥಿತಿ ಚಿಂತೆಯ ವಿಷಯವಾಗಿ ಪರಿಣಮಿಸಿದ್ದು, ದೈನಂದಿನ ಪ್ರಕರಣಗಳಲ್ಲಿ 30 ದಿನಗಳಲ್ಲಿ ಗರಿಷ್ಠ ಕೇಸ್ ಗಳು(16,752) ರವಿವಾರ ದಾಖಲಾಗಿದೆ. ಭಾರತವು ಲಸಿಕೆ ನೀಡಿಕೆ ಅಭಿಯಾನದ ಎರಡನೇ ಹಂತ ಆರಂಭಿಸಲು ಸಜ್ಜಾಗಿರುವಾಗ ಈ ಬೆಳವಣಿಗೆ ನಡೆದಿದೆ. ಎರಡನೇ ಹಂತದಲ್ಲಿ 60ಕ್ಕಿಂತ ಹೆಚ್ಚು ವಯಸ್ಸಿನ ಹಾಗೂ ಇತರ ಕಾಯಿಲೆಯಿರುವ 45 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತದೆ.
ಆರು ರಾಜ್ಯಗಳಾದ-ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ತಮಿಳುನಾಡು ಹಾಗೂ ಗುಜರಾತ್ ರಾಜ್ಯಗಳಲ್ಲಿ ಕೋವಿಡ್ ಕೇಸ್ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರದಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯು 8,623ಕ್ಕೆ ತಲುಪಿದ್ದು, ಆ ನಂತರ ಕೇರಳ 3792 ಹಾಗೂ ಪಂಜಾಬ್ 593 ರಾಜ್ಯಗಳಿವೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನೈಟ್ ಕಫ್ಯೂವನ್ನು ಮಾರ್ಚ್ 14ರ ತನಕ ವಿಸ್ತರಿಸಲಾಗಿದೆ.
ಈ 6 ರಾಜ್ಯಗಳಲ್ಲದೆ ಮಧ್ಯಪ್ರದೇಶ ಹಾಗೂ ಹರ್ಯಾಣದಲ್ಲೂ ಕೊರೋನ ಪ್ರಕರಣ ಏರುತ್ತಿದೆ.
ಕೇಂದ್ರ ಸರಕಾರವು ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ವೆಸ್ಟ್ ಬಂಗಾಳ, ಛತ್ತೀಸ್ ಗಢ, ಪಂಜಾಬ್, ಮಧ್ಯಪ್ರದೇಶ, ಗುಜರಾತ್ ಹಾಗೂ ಜಮ್ಮು-ಕಾಶ್ಮೀರಕ್ಕೆ ಉನ್ನತ ಮಟ್ಟದ ತಂಡಗಳನ್ನು ನಿಯೋಜಿಸಿದೆ.





