ರಾಹುಲ್ ಭಯ್ಯ, ನೀವು ರಜೆಯಲ್ಲಿದ್ದೀರಿ: ರಾಹುಲ್ ಗಾಂಧಿಯನ್ನು ಛೇಡಿಸಿದ ಅಮಿತ್ ಶಾ

ಪುದುಚೆರಿ, ಫೆ.28: ಕಳೆದ ವಾರ ಪುದುಚೆರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೀನುಗಾರರ ಅಗತ್ಯಗಳ ಬಗ್ಗೆ ಗಮನ ಹರಿಸಲು ಕೇಂದ್ರ ಸರಕಾರ ಯಾಕೆ ಪ್ರತ್ಯೇಕ ಇಲಾಖೆ ರಚಿಸುವುದಿಲ್ಲ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗಾಗಿ ಬಿಜೆಪಿ ಮುಖಂಡರಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್‌ರನ್ನು ಛೇಡಿಸಿದ್ದಾರೆ.
‘ಮೋದಿ ಸರಕಾರ ಮೀನುಗಾರರಿಗಾಗಿ ಪ್ರತ್ಯೇಕ ಇಲಾಖೆಯನ್ನು ಯಾಕೆ ರಚಿಸುವುದಿಲ್ಲ ಎಂದು ಕೆಲ ದಿನಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ನರೇಂದ್ರ ಮೋದಿಯವರು ಎರಡು ವರ್ಷದ ಹಿಂದೆಯೇ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದ್ದಾರೆ. ರಾಹುಲ್ ಭಯ್ಯಾ, ನೀವು ರಜೆಯಲ್ಲಿದ್ದೀರಿ ಆದ್ದರಿಂದ ನಿಮಗೆ ತಿಳಿದಿಲ್ಲ’ ಎಂದು ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.
ಪುದುಚೆರಿಯ ಜನರಿಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. 4 ಅವಧಿಯಲ್ಲಿ ಲೋಕಸಭೆಯಲ್ಲಿದ್ದರೂ ಕೇಂದ್ರದಲ್ಲಿ 2 ವರ್ಷದ ಹಿಂದೆ ಆರಂಭವಾದ ಮೀನುಗಾರಿಕಾ ಇಲಾಖೆಯ ಬಗ್ಗೆ ತಿಳಿದಿಲ್ಲದ ಮುಖಂಡರು ಇರುವ ಪಕ್ಷವು ಪುದುಚೆರಿಯ ಹಿತಚಿಂತನೆ ನಡೆಸಬಲ್ಲದೇ ?ಎಂದು ಶಾ ಹೇಳಿದ್ದಾರೆ. ಎಪ್ರಿಲ್ 6ರಂದು ನಡೆಯಲಿರುವ ಪುದುಚೆರಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಚಾರ ಸಭೆಯಲ್ಲಿ ಶಾ ಪಾಲ್ಗೊಂಡಿದ್ದರು.





