ಭಾರತದಲ್ಲಿ ವಿಜ್ಞಾನಕ್ಕೆ ಜನಿವಾರ ತೊಡಿಸಲಾಗಿದೆ: ಇಸ್ರೋ ನಿವೃತ್ತ ವಿಜ್ಞಾನಿ ಪ್ರೊ.ವಿ.ಜಗನ್ನಾಥ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಬೆಂಗಳೂರು, ಫೆ. 28: ‘ಭಾರತದಲ್ಲಿ ವಿಜ್ಞಾನಕ್ಕೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. 2,500ಕ್ಕೂ ಹೆಚ್ಚು ವರ್ಷಗಳ ಪರಂಪರೆ ಹೊಂದಿರುವ ವಿಜ್ಞಾನಕ್ಕೆ ಜನಿವಾರ ತೊಡಿಸಲಾಗಿದೆ' ಎಂದು ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿ ಪ್ರೊ.ವಿ.ಜಗನ್ನಾಥ ಅಭಿಪ್ರಾಯಿಸಿದ್ದಾರೆ.
ರವಿವಾರ ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವೈಜ್ಞಾನಿಕ ಜಲ ಸಾಕ್ಷರತೆ' ಕುರಿತು ಮಾತನಾಡಿದ ಅವರು, ‘ಮಳೆ ಕಡಿಮೆಯಾದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಳೆ ಬಾರದಿದ್ದರೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ, ಭಾರತದಲ್ಲಿ ದೇವಸ್ಥಾನಗಳಲ್ಲಿ ಹಣ ಖರ್ಚು ಮಾಡಿ ಪೂಜೆ ಮಾಡಿಸಲಾಗುತ್ತದೆ' ಎಂದು ವಿಷಾದಿಸಿದ್ದಾರೆ.
‘ದೇಶದಲ್ಲಿ ಭಗವಾನ್ ಬುದ್ಧ ವೈಜ್ಞಾನಿಕ ಚಿಂತನೆಗಳನ್ನು ಭಿತ್ತಿದ. ಅದನ್ನು ಮುಂದುವರಿಸಿ ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪುವರೆಗೂ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ, ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆ, ಸಮೂಹ ಮಾಧ್ಯಮಗಳು ವಿಜ್ಞಾನವನ್ನು ಹಾಳು ಮಾಡುತ್ತಿವೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಭಾರತದಲ್ಲಿ ಸಾವಿರಾರು ವರ್ಷಗಳಿಂದ ವೈಜ್ಞಾನಿಕ ವಿಧಾನಗಳ ಮೂಲಕ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ, ಆಧುನಿಕತೆ ಹಾಗೂ ಖಾಸಗಿಕರಣದ ಸುಳಿಗೆ ಸಿಲುಕಿರುವ ಸರಕಾರಗಳು ಜಲ ಮೂಲಗಳನ್ನು ನಾಶ ಮಾಡುತ್ತಾ ಹೊರಟಿದೆ. ಸದ್ಯ, ಈಗ ಉಳಿದಿರುವ ಜಲ ಮೂಲಗಳಾದ ಕೆರೆ, ಕುಂಟೆ, ಹಳ್ಳಗಳು, ಝರಿಗಳು, ಬೆಟ್ಟಗುಡ್ಡಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ' ಎಂದು ಅವರು ತಿಳಿಸಿದ್ದಾರೆ.
‘ಮನುಷ್ಯನಿಗೆ ಹೆಚ್ಚಿನ ಸೋಂಕುಗಳು ತಗುಲುವುದು ಕಲುಷಿತ ನೀರಿನಿಂದ ಮಾತ್ರ ಎಂಬುದನ್ನು ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ. ಹಾಗೂ ಪ್ರತಿ ಪಂಚಾಯತ್‍ಗಳಲ್ಲಿ ಪ್ರತಿ ಹಳ್ಳಿಗಳಿಗೆ ಸರಬರಾಜಾಗುವ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸುವಂತೆ ಒತ್ತಡ ಹೇರಬೇಕಾಗಿದೆ' ಎಂದು ಅವರು ತಿಳಿಸಿದ್ದಾರೆ.
ವಿಚಾರ ವೇದಿಕೆ ಟ್ರಸ್ಟ್ ನ ಕಾರ್ಯದರ್ಶಿ ಆರ್.ನಾಗೇಶ ಅರಳಕುಪ್ಪೆ ಮಾತನಾಡಿ, ‘ದೇಶದಲ್ಲಿ ಆಧುನಿಕತೆ ಬೆಳೆದಂತೆಲ್ಲಾ ಮೌಢ್ಯಗಳು ಬಲಿಷ್ಠಗೊಳ್ಳುತ್ತಿವೆ. ಜಗತ್ತಿನ ಎಲ್ಲ ದೇಶಗಳು ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಸಾವಿರಾರು ಕೋಟಿ ರೂ. ಹಣ ವ್ಯಯ ಮಾಡುತ್ತಿದ್ದಾರೆ, ಭಾರತದಲ್ಲಿ ದೇವಸ್ಥಾನ ಕಟ್ಟುವುದಕ್ಕೆ ಸಾವಿರಾರು ಕೋಟಿ ರೂ. ನೀಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.
‘ದೇವಸ್ಥಾನ ನಿರ್ಮಿಸಲು ಒದಗಿಸುವ ಹಣವನ್ನು ಶಾಲೆಗಳನ್ನು ಆಧುನಿಕರಣಗೊಳಿಸಲು, ಗ್ರಂಥಾಲಯಗಳನ್ನು ನಿರ್ಮಿಸಲು ವಿನಿಯೋಗವಾಗಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಅನುಕೂಲವಾಗುತ್ತಿತ್ತು 'ಎಂದು ಅವರು ಅಭಿಪ್ರಾಯಿಸಿದ್ದಾರೆ.
ಈ ವೇಳೆ ವಿಚಾರವಾದಿ ವೇದಿಕೆಯ ಅಧ್ಯಕ್ಷ ಪ್ರೊ.ಎಸ್.ನಟರಾಜ್, ಉಪಾಧ್ಯಕ್ಷ ಪ್ರಕಾಶ ಹೆಬ್ಬಳ್ಳಿ, ನಾಗೇಂದ್ರ ಕುಮಾರ್ ಮತ್ತಿತರರಿದ್ದರು.







