ಯೋಗೇಶ್ವರ್ ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ: ಮಾಜಿ ಸಚಿವ ಸಾ.ರಾ.ಮಹೇಶ್

ಬೆಂಗಳೂರು, ಫೆ. 28: ‘ಹುಟ್ಟೂರಲ್ಲೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೇ? ಮುಂದಿನ ದಿನಗಳಲ್ಲಿ ಎಚ್‍ಡಿಕೆಯನ್ನು ಚನ್ನಪಟ್ಟಣದಿಂದ ಹೊರಹಾಕುತ್ತೇನೆ ಎಂಬ ಯೋಗೇಶ್ವರ್ ಮಾತು ವಾಸ್ತವವೇ? ಯೋಗೇಶ್ವರ್ ಲೀಲೆಗಳು ಅಲ್ಲಿನ ಜನರಿಗೆ ಮನದಟ್ಟಾಗಿವೆ. ಸಿ.ಡಿಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಪರಿಷತ್ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಲಿ' ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸಲಹೆ ಮಾಡಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಚನ್ನಪಟ್ಟಣದ ಚಕ್ಕೆರೆ ‘ಸರ್ವಪಕ್ಷ ಸದಸ್ಯ' ಯೋಗೇಶ್ವರ್ ಹುಟ್ಟೂರು. ಯಾವುದೇ ನಾಯಕನಿಗೆ ಹುಟ್ಟೂರಿನಲ್ಲಾದರೂ ಮರ್ಯಾದೆ ಇರುತ್ತದೆ. ಆದರೆ, ಯೋಗೇಶ್ವರ್ ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ. ಮೊನ್ನೆ ನಡೆದ ಗ್ರಾ.ಪಂ.ಚುನಾವಣೆಯಲ್ಲಿ ಇಡೀ ಚಕ್ಕರೆ ಗ್ರಾಮ ಪಂಚಾಯತ್ ಜೆಡಿಎಸ್ ಬೆಂಬಲಿಸಿದೆ. ಈ ನೋವು ಅವರನ್ನು ಕಾಡುತ್ತಿರಬಹುದು' ಎಂದು ಲೇವಡಿ ಮಾಡಿದ್ದಾರೆ.
‘ಗ್ರಾ.ಪಂ.ಚುನಾವಣೆಯಲ್ಲಿ, ಚನ್ನಪಟ್ಟಣದಲ್ಲಿ ‘ಸರ್ವಪಕ್ಷ ಸದಸ್ಯ' ಸಿ.ಪಿ.ಯೋಗೇಶ್ವರ್ ಬೆಂಬಲಿತ ಅಭ್ಯರ್ಥಿಗಳು ಹೇಳಹೆಸರಿಲ್ಲದೇ ಸೋತಿದ್ದಾರೆ. ಶೇ.80ರಷ್ಟು ಜೆಡಿಎಸ್ ಗೆದ್ದಿದೆ. ದಿನೇ ದಿನೇ ಚನ್ನಪಟ್ಟಣ ಕ್ಷೇತ್ರ ದೂರವಾಗುತ್ತಿರುವುದು ನೋಡಲಾಗದೇ ಕ್ಷೇತ್ರ ಕಳೆದುಹೋಗಿರುವ ನೋವು ತಡೆಯಲಾಗದೇ ಯೋಗೇಶ್ವರ್ ಗೆ ಮತಿ ಭ್ರಮಣೆಯಾಗಿದೆ. ಅದಕ್ಕೇ ಉರಿ ಮಾತು' ಎಂದು ಮಹೇಶ್ ಟೀಕಿಸಿದ್ದಾರೆ.
ಮನಸ್ಸು ಮಂಗನಂತೆ: ‘ಯೋಗೇಶ್ವರ್ ರಾಜಕೀಯ ಪ್ರಬುದ್ಧನಲ್ಲ. ಆತನ ಮನಸ್ಸು ಮಂಗನಂತೆ ಚಂಚಲ. ಹೀಗಾಗಿಯೇ ಊರಲ್ಲಿರುವ ಪಕ್ಷಗಳನ್ನೆಲ್ಲ ಸುತ್ತಿಬಂದಿದ್ದಾನೆ. ಈಗ ಬಿಜೆಪಿಯಲ್ಲಿ ಕುಳಿತು ಸಿದ್ಧಾಂತದ ಮಾತಾಡುತ್ತಾನೆ. ಆತನ ಬಾಯಲ್ಲಿ ಸಿದ್ಧಾಂತ ಕೇಳಿ ನಗಲಾರದವರೂ ನಕ್ಕರೆ ಆಶ್ಚರ್ಯವಿಲ್ಲ' ಎಂದು ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಟೀಕಿಸಿದ್ದಾರೆ.
ಈ ಸಂಬಂಧ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಅವರು, ‘ಯೋಗೇಶ್ವರ್ ಒಬ್ಬ ಸುಳ್ಳುಕೋರ. ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಲು ಹೊರಟ ಆತ, ತಾನು ಕುಮಾರಸ್ವಾಮಿ ಅವರನ್ನು ಅಡ್ಜೆಸ್ಟ್ ಮಾಡಿರುವುದಾಗಿ ಚುನಾವಣೆ ವೇಳೆ ಅಪಪ್ರಚಾರ ಮಾಡಿದ್ದ. ಯೋಗೇಶ್ವರನ ಮಾತಿನಿಂದ ಜೆಡಿಎಸ್ ಕಾರ್ಯಕರ್ತರು, ಎಚ್ಡಿಕೆ ಅವರಲ್ಲಿ ಉಂಟಾದ ಕೋಪದ ಬೆಂಕಿಗೆ ಆತ ಸೋತ. ಆತನ ಸುಳ್ಳು, ಅಪ್ರಬದ್ಧ ಮಾತುಗಳು ಅವನನ್ನು ಮುಗಿಸಿದವು' ಎಂದು ಲೇವಡಿ ಮಾಡಿದ್ದಾರೆ.
‘ಸುಳ್ಳು, ಬೆದರಿಕೆ, ಸೀಡಿ, ಫೋಟೊಗಳಿಂದ ಮಂತ್ರಿಯಾದ ಏಕೈಕ ಉದಾಹರಣೆ ಯೋಗೇಶ್ವರ್. ಇಂಥ ನಾಲಾಯಕ್ ವ್ಯಕ್ತಿತ್ವದ ವ್ಯಕ್ತಿ ಎಚ್‍ಡಿಕೆ ಅವರಂಥವರನ್ನು ಟೀಕಿಸುತ್ತಿರುವುದು ಸರಿಯಲ್ಲ. ಬಿಜೆಪಿ ವಿರುದ್ಧ ಎಚ್‍ಡಿಕೆ ವಿಷಯಾಧಾರಿತವಾಗಿ ಮಾತಾಡುತ್ತಾರೆ. ದ್ವೇಷ ಸಾಧಿಸಲ್ಲ. ಹಾಗಿದ್ದು, ಎಚ್ಡಿಕೆ ವಿರುದ್ಧ ಬಿಜೆಪಿ ಇಂಥವರನ್ನು (?) ಚೂ ಬಿಡಬಾರದು ಎಂದು ಶರವಣ ಸಲಹೆ ಮಾಡಿದ್ದಾರೆ.







