ಅಕ್ರಮ ಡಿನೋಟಿಫಿಕೇಷನ್ ಆರೋಪ: ಸಿದ್ದರಾಮಯ್ಯ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು, ಮಾ.2: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿದ್ದ ಅಕ್ರಮ ಡಿನೋಟಿಫಿಕೇಷನ್ ಆರೋಪ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ಎ.ಎಸ್.ಬೋಪಣ್ಣ ಮತ್ತು ವಿ.ಸುಬ್ರಹ್ಮಣ್ಯ ಅವರನ್ನೊಳಗೊಂಡ ವಿಭಾಗೀಯ ಪೀಠ, 23 ವರ್ಷಗಳ ಹಿಂದಿನ ಪ್ರಕರಣವನ್ನು ವಜಾಗೊಳಿಸಿದೆ.
ಮೈಸೂರಿನ ವಿಜಯನಗರ 2ನೆ ಹಂತದ ಬಡಾವಣೆ ನಿರ್ಮಾಣಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ) ಸ್ವಾಧೀನಪಡಿಸಿಕೊಂಡಿದ್ದ 535 ಎಕರೆ ಜಮೀನಿನಲ್ಲಿ 30 ಗುಂಟೆ ಜಮೀನು ಡಿನೋಟಿಫೈ ಮಾಡಲಾದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. 1997ರ ಪ್ರಕರಣ ಇದಾಗಿದ್ದು, ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು.
ಡಿನೋಟಿಫೈ ಮಾಡಲಾದ 30 ಗುಂಟೆ ಜಮೀನು ಪೈಕಿ 10 ಗುಂಟೆ ಖರೀದಿಸಿ ಸಿದ್ದರಾಮಯ್ಯ ಮನೆ ನಿರ್ಮಾಣ ಮಾಡಿ, ಬಳಿಕ ಆ ಮನೆ ಮಾರಾಟ ಮಾಡಿದ್ದರು. ಈ ರೀತಿ ನೋಟಿಫೈ ಮಾಡಿದ ಜಾಗವನ್ನು ಮಾರಾಟ ಮಾಡಿ ಸಿದ್ದರಾಮಯ್ಯ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಗಂಗರಾಜು ಅವರು ಚುನಾಯಿತ ಪ್ರತಿನಿಗಳ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಸಮನ್ಸ್ ನೀಡಲಾಗಿತ್ತು.
ತಮಗೆ ನೀಡಿದ್ದ ಸಮನ್ಸ್ ನ್ನು ಸಿದ್ದರಾಮಯ್ಯ ಅವರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಸಿದ್ದರಾಮಯ್ಯ ಅವರ ಪರವಾಗಿ ತೀರ್ಪು ನೀಡಿ ಸಮನ್ಸ್ ನ್ನು ವಜಾಗೊಳಿಸಿತ್ತು. ಗಂಗರಾಜು ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಸುಪ್ರೀಂಕೋರ್ಟ್‍ನ ವಕೀಲ ಎಚ್.ಬಿ.ಶಿವರಾಜು ಸುಮಾರು 20 ನಿಮಿಷ ಕಾಲ ವಾದ ಮಂಡಿಸಿದ್ದರು.
ಆದರೆ, ಅರ್ಜಿದಾರರು ಮಾಡಿದ ಆರೋಪಕ್ಕೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದುದರಿಂದ ಎಸ್‍ಎಲ್‍ಪಿಯನ್ನು ವಜಾಗೊಳಿಸಲಾಗಿದೆ.







