ಮಂಗಳೂರು ವಿವಿ ಅಂತರ್ ಕಾಲೇಜು ಪುರುಷರ, ಮಹಿಳೆಯರ ಕ್ರೀಡಾಕೂಟ: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ಉಡುಪಿ, ಮಾ.2: ಮಂಗಳೂರು ವಿಶ್ವವಿದ್ಯಾಲಯ, ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಜಿಲ್ಲಾ ಅಮೆಚೂರು ಅತ್ಲೆಟಿಕ್ ಅಸೋಸಿಯೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ 40ನೆ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಕ್ರೀಡಾಕೂಟದಲ್ಲಿ ಮೂಡ ಬಿದಿರೆಯ ಆಳ್ವಾಸ್ ಕಾಲೇಜು ಮಗ್ರ ಪ್ರಶಸ್ತಿ ಗೆದ್ದುಕೊಂಡಿತು.
ಸಮಗ್ರ ಪ್ರಶಸ್ತಿಯಲ್ಲಿ ದ್ವಿತೀಯ ಉಜಿರೆ ಎಸ್‌ಡಿಎಂ ಕಾಲೇಜು, ತೃತೀಯ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು, ನಾಲ್ಕನೇ ಸ್ಥಾನವನ್ನು ಪುತ್ತೂರು ಎಸ್‌ಪಿಸಿ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಮಹಾಂತೇಶ್ ಎಸ್.ಎಚ್. ಮತ್ತು ಮಹಿಳಾ ವಿಭಾಗದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿಯನ್ನು ಗೋಣಿಕೊಪ್ಪ ಕಾವೇರಿ ಕಾಲೆೀಜಿನ ಜ್ಯೋತಿಕಾ ಪಡೆದುಕೊಂಡರು.
ಪುರುಷರ ವಿಭಾಗದಲ್ಲಿ ಪ್ರಥಮ ಆಳ್ವಾಸ್ ಕಾಲೇಜು, ದ್ವಿತೀಯ ಉಜಿರೆ ಎಸ್‌ಡಿಎಂ ಕಾಲೇಜು, ತೃತೀಯ ಪುತ್ತೂರು ಎಸ್‌ಪಿಸಿ, ನಾಲ್ಕನೆ ಸ್ಥಾನವನ್ನು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮತ್ತು ಮಹಿಳಾ ವಿಭಾಗದಲ್ಲಿ ಪ್ರಥಮ ಆಳ್ವಾಸ್ ಕಾಲೇಜು, ದ್ವಿತೀಯ ಉಜಿರೆ ಎಸ್‌ಡಿಎಂ, ತೃತೀಯ ಮಂಗಳೂರು ವಿವಿ ಕೊಣಾಜೆ ಕ್ಯಾಂಪಸ್, ನಾಲ್ಕನೆ ಸ್ಥಾನವನು್ನ ಉಡುಪಿ ಪಿಪಿಸಿ ತನ್ನದಾಗಿಸಿ ಕೊಂಡಿತು.
ಮಂಗಳವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಹಿಸಿದ್ದರು. ಮಣಿಪಾಲ ಕೆಎಂಸಿಯ ಡೀನ್ ಡಾ.ಶರತ್ ರಾವ್, ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ದೇವಾ ನಂದ, ಜಿಲ್ಲಾ ಅಮೆಚೂರು ಅತ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಕೆಂಪರಾಜ್ ಎಚ್.ಬಿ., ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್‌ಕುಮಾರ್ ಸಿ.ಕೆ. ಉಪಸ್ಥಿತರಿದ್ದರು.
ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ವಂದಿಸಿ, ವಿಜೇತ ತಂಡದ ಪಟ್ಟಿ ವಾಚಿಸಿದರು. ಉಪನ್ಯಾಸಕ ನಿತ್ಯಾನಂದ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕೂಟದಲ್ಲಿ ಮಂಗಳೂರು ವಿವಿ ವ್ಯಾಪ್ತಿಯ 73 ಕಾಲೇಜುಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.







