ಎರಡು ವರ್ಷದೊಳಗೆ ಮುಡಿಪು ಕೇಂದ್ರ ಕಾರಾಗೃಹ ಕಾಮಗಾರಿ ಪೂರ್ಣ: ಅಲೋಕ್ ಮೋಹನ್

ಮಂಗಳೂರು, ಮಾ.2: ಕೊಣಾಜೆ ಸಮೀಪದ ಮುಡಿಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕೇಂದ್ರ ಕಾರಾಗೃಹ ಕಾಮಗಾರಿಯು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಬಂಧೀಖಾನೆ ವಿಭಾಗದ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.
ಮಂಗಳವಾರ ನೂತನ ಜೈಲು ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ನಗರ ಪೊಲೀಸ್ ಆಯುಕ್ತಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದೊಂದು ವರ್ಷದಿಂದ ಕಾಮಗಾರಿ ಭರದಿಂದ ನಡೆಯುತ್ತಿದೆ. ಸುಮಾರು 100 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಕಾರಾಗೃಹದಲ್ಲಿ 1,000 ಮಂದಿ ಕೈದಿಗಳು ಉಳಿದುಕೊಳ್ಳಲು ಸ್ಥಳಾವಕಾಶವಿರುತ್ತದೆ. ಅತ್ಯಂತ ಭದ್ರತಾ ವ್ಯವಸ್ಥೆಯೊಂದಿಗೆ ನಿರ್ಮಾಣ ಗೊಳ್ಳಲಿದೆ ಎಂದು ಅಲೋಕ್ ಮೋಹನ್ ಹೇಳಿದರು.
ಮಂಗಳೂರಿನಲ್ಲಿರುವ ಜೈಲಿನಲ್ಲಿ ವಿಚಾರಾಣಾಧೀನ ಕೈದಿಗಳನ್ನು ಮಾತ್ರ ಉಳಿಸಿಕೊಂಡು ವಿಚಾರಣೆ ಪೂರ್ಣಗೊಂಡು ಶಿಕ್ಷೆಗೊಳಗಾದವರನ್ನು ಶಿವಮೊಗ್ಗದ ಜೈಲಿಗೆ ಕಳುಹಿಸಿಕೊಡಲಾಗುತ್ತದೆ. ಮುಡಿಪುವಿನಲ್ಲಿ ಹೊಸ ಸೆಂಟ್ರಲ್ ಜೈಲು ನಿರ್ಮಾಣವಾದ ನಂತರ ಶಿಕ್ಷೆಗೊಳಗಾದ ಕೈದಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಮಂಗಳೂರಿನಲ್ಲಿ ಈಗ ಇರುವ ಜೈಲನ್ನು ಮೇಲ್ದರ್ಜೆಗೇರಿಸಿ ವಿಚಾರಣಾಧೀನ ಕೈದಿಗಳನ್ನು ಉಳಿಸಿಕೊಳ್ಳಲಾಗುವುದು ಎಂದು ಅಲೋಕ್ ಮೋಹನ್ ತಿಳಿಸಿದರು.
ಜೈಲುಗಳಲ್ಲಿ ಅಕ್ರಮ ತಡೆಗೆ ಕ್ರಮ
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅಲೋಕ್ ಮೋಹನ್ ಮಂಗಳೂರು ಜೈಲಿನಲ್ಲಿ ಈಗ ಮೊಬೈಲ್, ಗಾಂಜಾ ಮತ್ತಿತರ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಹಲವು ಸುಧಾರಣೆ ತರಲಾಗಿದೆ. ಈಗ ಮೊದಲಿನಂತಹ ದೂರುಗಳು ಬರುತ್ತಿಲ್ಲ. ಜೈಲುಗಳಲ್ಲಿ ಕೈದಿಗಳು ತಂಡ ಕಟ್ಟಿಕೊಂಡು ಸಂಘರ್ಷಕ್ಕಿಳಿಯುವುದನ್ನು ತಡೆಯಲು ಕೈದಿಗಳ ಮೇಲೆ ನಿಗಾ ಇಡಲಾಗುತ್ತಿದೆ. ಅಂತಹ ಕೈದಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತಿದೆ’ ಎಂದು ಹೇಳಿದರು.
ನೇರ ಸಂದರ್ಶನಕ್ಕೆ ಸದ್ಯ ಅವಕಾಶವಿಲ್ಲ
ಕೊರೋನ ಹಿನ್ನೆಲೆಯಲ್ಲಿ ಕೈದಿಗಳನ್ನು ಅವರ ಸಂಬಂಧಿಕರು ಕಾರಾಗೃಹಕ್ಕೆ ಬಂದು ನೇರವಾಗಿ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಅದರ ಬದಲು ಪೋನ್ ಬಳಕೆಗೆ ಅವಕಾಶ ನೀಡಲಾಗಿದೆ. ಅಲ್ಲದೆ ವೀಡಿಯೋ ಕಾಲ್ ಮೂಲಕ ಕುಟುಂಬ ಸದಸ್ಯರ ಜತೆಗೆ ಮಾತನಾಡಲು ಅವಕಾಶ ಮಾಡಿಕೊಡಲಾಗಿದೆ. ಮಂಗಳೂರಿನಲ್ಲಿ ಕಳೆದೆರಡು ತಿಂಗಳುಗಳಲ್ಲಿ ಸುಮಾರು 170 ಮಂದಿ ಕೈದಿಗಳು ಇದನ್ನು ಬಳಸಿಕೊಂಡಿದ್ದಾರೆ ಎಂದು ಅಲೋಕ್ ಮೋಹನ್ ತಿಳಿಸಿದರು.
ಈ ಸಂದರ್ಭ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜೈಲು ಅಧೀಕ್ಷಕ ಚಂದರ್ ಪಟೇಲ್, ಉಪಸ್ಥಿತರಿದ್ದರು.







