ಶಾಸಕ ತನ್ವೀರ್ ಸೇಠ್‍ಗೆ ಕೆಪಿಸಿಸಿ ನೋಟಿಸ್

ಬೆಂಗಳೂರು, ಮಾ.2: ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ತಪ್ಪಿರುವ ಸಂಬಂಧ ಕೆಪಿಸಿಸಿ ವತಿಯಿಂದ ಮಾಜಿ ಸಚಿವ ತನ್ವೀರ್ ಸೇಠ್‍ಗೆ ನೋಟಿಸ್ ನೀಡಲಾಗಿದೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಭೇಟಿ ಮಾಡಿದ ಮಾಜಿ ಸಚಿವ ತನ್ವೀರ್ ಸೇಠ್, ಮೇಯರ್ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆಗಳ ಕುರಿತು ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್, ಮೈಸೂರು ಮೇಯರ್ ಚುನಾವಣೆಯ ಸಂಬಂಧ ಎಐಸಿಸಿ ಸೂಚನೆಯ ಮೇರೆಗೆ ಕೆಪಿಸಿಸಿ ಕಾರಣ ಕೇಳಿ ನೋಟಿಸ್ ನೀಡಿದೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಹೀಗಾಗಿ ಕೆಪಿಸಿಸಿ ಶಿಸ್ತು ಸಮಿತಿ ನೀಡಿರುವ ನೋಟಿಸ್‍ಗೆ ಎರಡು-ಮೂರು ದಿನದಲ್ಲಿ ಉತ್ತರ ರೂಪದಲ್ಲಿ ಮತ್ತಷ್ಟು ವಿವರಗಳನ್ನು ನೀಡುತ್ತೇನೆಂದು ಮಾಹಿತಿ ನೀಡಿದ್ದಾರೆ.
ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಪಕ್ಷದ ವತಿಯಿಂದ ತೀರ್ಮಾನಿಸಲಾಗಿತ್ತು. ಈ ಸಂಬಂಧ ವೀಕ್ಷಕರನ್ನು ನೇಮಿಸಲಾಗಿತ್ತು. ಜೆಡಿಎಸ್ ನಾಯಕರೊಂದಿಗೆ ಮಾತನಾಡುವ ಜವಾಬ್ದಾರಿಯನ್ನು ಮಾತ್ರ ನನಗೆ ವಹಿಸಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ಉಪಮೇಯರ್ ಸ್ಥಾನ ಒಪ್ಪಿಕೊಳ್ಳಬೇಕಾಯಿತೆಂದು ಅವರು ತಿಳಿಸಿದ್ದಾರೆ.





