ಐಶಾರಾಮಿ ಕಾರು ಮಾರಾಟ ಪ್ರಕರಣ : ಸಿಸಿಬಿಯ 24 ಪೊಲೀಸರ ವಿರುದ್ಧ ದೂರು ದಾಖಲು ?

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ. 2: ನಗರದ ಸಿಸಿಬಿ ತಂಡದ ಇನ್ಸ್ಪೆಕ್ಟರ್ ಸಹಿತ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿರುವ ಮಧ್ಯೆಯೇ ಇದೀಗ ಸಿಸಿಬಿಯಲ್ಲಿರುವ 24 ಮಂದಿಯ ವಿರುದ್ಧವೂ ಪ್ರಕರಣ ದಾಕಲಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ನಿಚ್ಛಳವಾಗಿದೆ. ಈಗಾಗಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ಸಿಸಿಬಿಯಲ್ಲಿದ್ದ ಎಲ್ಲಾ ಪೊಲೀಸರನ್ನು ವಿಚಾರಣೆಗೊಳಪಡಿಸಲಿದ್ದಾರೆ ಎನ್ನಲಾಗಿದೆ.
ಎಲಿಯಾ ಕನ್ಸ್ಟ್ರಕ್ಷನ್ ಸಂಸ್ಥೆಯು ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಹಲವರಿಂದ ಹಣ ಸಂಗ್ರಹಿಸಿ ವಂಚನೆ ಮಾಡಿದ ಬಗ್ಗೆ ನಗರದ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ (ಇ ಆ್ಯಂಡ್ ಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕಂಪೆನಿ ಹಲವು ಮಂದಿಗೆ ಸುಮಾರು 30 ಕೋ.ರೂ.ಗಳಷ್ಟು ವಂಚಿಸಿತ್ತು ಎಂದು ದೂರಲಾಗಿತ್ತು.
ಇ ಆ್ಯಂಡ್ ಎನ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಸಿಸಿಬಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾರನ್ನು ಜಪ್ತಿ ಮಾಡಿದ್ದರು. ಆದರೆ ಆರೋಪಿಗಳನ್ನು ಹಾಜರುಪಡಿಸುವಾಗ ಕಾರನ್ನು ತೋರಿಸಿರಲಿಲ್ಲ. ಈ ಬಗ್ಗೆ ತನಿಖಾಧಿಕಾರಿ ರಾಮಕೃಷ್ಣ ಸಿಬ್ಬಂದಿಗಳನ್ನು ಪ್ರಶ್ನಿಸದೆ ಕರ್ತವ್ಯ ಲೋಪವೆಸಗಿದ್ದರು ಎನ್ನಲಾಗಿದೆ. ಆ ಕರ್ತವ್ಯ ಲೋಪವೇ ಇದೀಗ ರಾಮಕೃಷ್ಣ ಅವರ ಅಮಾನತಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.







