ಉದ್ಯೋಗದ ಸ್ಥಳದಲ್ಲಿ ಲಿಂಗ ತಾರತಮ್ಯ: ಏಶ್ಯಾ ಪೆಸಿಫಿಕ್ ವಲಯದಲ್ಲಿ ಭಾರತದಲ್ಲೇ ಅತ್ಯಧಿಕ
ಹೊಸದಿಲ್ಲಿ, ಮಾ.2: ಭಾರತದಲ್ಲಿ ಲಿಂಗ ಸಮಾನತೆ ಈ ಹಿಂದಿಗಿಂತ ಹೆಚ್ಚಿದೆ ಎಂದು 66% ದೇಶವಾಸಿಗಳು ಭಾವಿಸಿದ್ದರೂ, ಭಾರತದಲ್ಲಿ ದುಡಿಯುವ ಮಹಿಳೆಯರು ಏಶ್ಯಾ ಪೆಸಿಫಿಕ್ ದೇಶಗಳಲ್ಲೇ ಅತ್ಯಧಿಕ ಲಿಂಗ ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಮಂಗಳವಾರ ಬಿಡುಗಡೆಯಾದ ಲಿಂಕೆಡಿನ್‌ನ ‘ಅವಕಾಶ ಸೂಚ್ಯಂಕ 2021’ ವರದಿ ತಿಳಿಸಿದೆ.
ವಿಶ್ವದ ಬೃಹತ್ ಆನ್‌ಲೈನ್ ವೃತ್ತಿಪರರ ನೆಟ್‌ವರ್ಕ್ ಆಗಿರುವ ಲಿಂಕೆಡಿನ್ ಜನವರಿ 26ರಿಂದ 31ರ ಅವಧಿಯಲ್ಲಿ, ಮಾರುಕಟ್ಟೆ ಸಂಶೋಧನೆ ಸಂಸ್ಥೆ ಜಿಎಫ್‌ಕೆಯ ಸಹಯೋಗದಲ್ಲಿ ಸಂಶೋಧನೆ ನಡೆಸಿದ್ದು ಆಸ್ಟ್ರೇಲಿಯಾ, ಚೀನಾ, ಭಾರತ, ಜಪಾನ್, ಮಲೇಶ್ಯಾ, ಫಿಲಿಪ್ಪೀನ್ಸ್ ಮತ್ತು ಸಿಂಗಾಪುರ ಸಹಿತ ಏಶ್ಯ ಪೆಸಿಫಿಕ್ ವಲಯದ 10,000ಕ್ಕೂ ಅಧಿಕ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಭಾರತದ 2,285 (1,223 ಪುರುಷರು, 1,053 ಮಹಿಳೆಯರು) ಮಂದಿ ಸೇರಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮುಂದುವರಿಯುವ ಅವಕಾಶದ ಕುರಿತು ಇರುವ ಅತೃಪ್ತಿಯ ಬಗ್ಗೆ ತಿಳಿಸುವಾಗ ಭಾರತದ 22% ಮಹಿಳೆಯರು, ತಾವು ಕೆಲಸ ಮಾಡುವ ಸಂಸ್ಥೆಯು ಪುರುಷ ಸಿಬ್ಬಂದಿ ಬಗ್ಗೆ ಅನುಕೂಲಕರ ಪಕ್ಷಪಾತ ತೋರುತ್ತಿದೆ ಎಂದಿದ್ದಾರೆ(ಪ್ರಾದೇಶಿಕವಾಗಿ 16% ಮಹಿಳೆಯರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ).
ಉದ್ಯೋಗ ಮಾರುಕಟ್ಟೆಯಲ್ಲಿ ತಮಗೆ ಪುರುಷರಿಗಿಂತ ಕಡಿಮೆ ಅವಕಾಶ ಸಿಗುತ್ತಿದೆ ಎಂದು ಭಾರತದ 37% ದುಡಿಯುವ ಮಹಿಳೆಯರು ಹೇಳಿದ್ದಾರೆ. ಆದರೆ ಇದನ್ನು ಕೇವಲ 25% ಪುರುಷರು ಒಪ್ಪಿದ್ದಾರೆ. 37% ಮಹಿಳೆಯರು ತಮಗೆ ಪುರುಷ ಸಹೋದ್ಯೋಗಿಗಳಿಗಿಂತ ಕಡಿಮೆ ವೇತನ ದೊರಕುತ್ತಿದೆ ಎಂದಿದ್ದರೆ, 21% ಪುರುಷರು ಇದನ್ನು ಒಪ್ಪಿದ್ದಾರೆ.
ಮಹಿಳೆ ಎಂಬ ಕಾರಣಕ್ಕೆ ತಮಗೆ ಉದ್ಯೋಗದಲ್ಲಿ ಭಡ್ತಿ ಅಥವಾ ಉತ್ತಮ ಕೆಲಸದ ಅವಕಾಶ ನಷ್ಟವಾಗಿದೆ ಎಂದು ಏಶ್ಯ ಪೆಸಿಫಿಕ್ ವಲಯದ 60% ದುಡಿಯುವ ಮಹಿಳೆಯರು ಅಭಿಪ್ರಾಯಪಟ್ಟಿದ್ದರೆ, ಭಾರತದಲ್ಲಿ ಈ ಅಭಿಪ್ರಾಯ ಇರುವ ಮಹಿಳೆಯರ ಪ್ರಮಾಣ 85% ಆಗಿದೆ. ಉದ್ಯೋಗ ಭದ್ರತೆ, ಉದ್ಯೋಗದ ಮೇಲೆ ಪ್ರೀತಿ ಮತ್ತು ಉದ್ಯೋಗ-ಜೀವನದ ಮಧ್ಯೆ ಸಮತೋಲನ ಈ ಮೂರು ಸುಯೋಗಗಳನ್ನು ಹೆಚ್ಚಿನವರು ತಮ್ಮ ವೃತ್ತಿಜೀವನದಲ್ಲಿ ಬಯಸುತ್ತಾರೆ. ಆದರೆ ಜೀವನದಲ್ಲಿ ಮುಂದುವರಿಯಲೂ ಲಿಂಗ ತಾರತಮ್ಯ ಅಡ್ಡಿಯಾಗುತ್ತಿದೆ ಎಂದು 63% ಮಹಿಳೆಯರು ಮತ್ತು 54% ಪುರುಷರು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗಿಗಳನ್ನು ಸಮಾನತೆಯಿಂದ (ಲಿಂಗ ತಾರತಮ್ಯವಿಲ್ಲದೆ) ಕಾಣುವ ಸಂಸ್ಥೆಗಳಲ್ಲಿ ಕೆಲಸ ಮಾಡಲು ಬಯಸುವುದಾಗಿ ಭಾರತದ 50% ಉದ್ಯೋಗಸ್ಥ ಮಹಿಳೆಯರು ಹೇಳಿದ್ದರೆ, ತಾವು ಮಾಡುವ ಕೆಲಸವನ್ನು ಗುರುತಿಸುವ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಬಯಸುವುದಾಗಿ 56% ಮಹಿಳೆಯರು ಹೇಳಿದ್ದಾರೆ. ವೃತ್ತಿಪರ ಕೌಶಲ್ಯದ ಕೊರತೆ ಮತ್ತು ಮಾರ್ಗದರ್ಶನದ ಕೊರತೆಯೂ ವೃತ್ತಿಜೀವನದ ಮುನ್ನಡೆಗೆ ತೊಡಕಾಗಿದೆ ಎಂದು ಭಾರತದ 65% ಉದ್ಯೋಗಸ್ಥ ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಕೆಲಸದ ಅವಧಿ ಕಡಿಮೆಗೊಳಿಸುವುದು, ಅರೆಕಾಲಿಕ ಉದ್ಯೋಗ, ಹೆರಿಗೆ ರಜೆ ಹೆಚ್ಚಳ, ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಅನುಕೂಲಕರ ಎಂದು ಬಹುತೇಕ ಉದ್ಯೋಗಸ್ಥ ಮಹಿಳೆಯರು ಒತ್ತಾಯಿಸಿದ್ದಾರೆ. ಉದ್ಯೋಗದ ಸ್ಥಳದಲ್ಲಿ ಲಿಂಗ ಅಸಮಾನತೆ ಮತ್ತು ಕೌಟುಂಬಿಕ ಜವಾಬ್ದಾರಿಯ ಹೆಚ್ಚುವರಿ ಹೊರೆಯು ಮಹಿಳೆಯರ ಉದ್ಯೋಗ ಕ್ಷೇತ್ರದ ಸವಾಲನ್ನು ಹೆಚ್ಚಿಸಿದ್ದು ಕೊರೋನ ಸೋಂಕು ಈ ಬಿರುಕನ್ನು ಮತ್ತಷ್ಟು ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಗಳು ತಮ್ಮ ವ್ಯವಸ್ಥೆಯನ್ನು ಮರುರೂಪಿಸಿ, ಮಹಿಳೆಯರಿಗೆ ಹೆಚ್ಚಿನ ಅನುಕೂಲ ಒದಗಿಸುವ ಮೂಲಕ ಕಾರ್ಯಪಡೆ(ಕೆಲಸದ ತಂಡ)ಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕಾಗಿದೆ ಎಂದು ಲಿಂಕೆಡಿನ್ ಇಂಡಿಯಾದ ‘ಟ್ಯಾಲೆಂಟ್ ಆ್ಯಂಡ್ ಲರ್ನಿಂಗ್ ಸೊಲ್ಯುಷನ್ಸ್’ನ ನಿರ್ದೇಶಕಿ ರುಚಿ ಆನಂದ್ ಹೇಳಿದ್ದಾರೆ.
ಕೌಟುಂಬಿಕ ಹೊಣೆಗಾರಿಕೆ
ಕೌಟುಂಬಿಕ ಹೊಣೆಗಾರಿಕೆ ತಮ್ಮ ವೃತ್ತಿಜೀವನದ ಮುನ್ನಡೆಗೆ ಅಡ್ಡಿಯಾಗುತ್ತಿದೆ ಎಂದು 71% ಉದ್ಯೋಗಸ್ಥ ಮಹಿಳೆಯರು ಮತ್ತು 77% ಉದ್ಯೋಗಸ್ಥ ತಾಯಂದಿರು ಹೇಳಿದ್ದಾರೆ. ಮನೆ ಮತ್ತು ಕುಟುಂಬದ ಹೊಣೆಗಾರಿಕೆಯಿಂದಾಗಿ ತಮಗೆ ಉದ್ಯೋಗದ ಸ್ಥಳದಲ್ಲಿ ತಾರತಮ್ಯದ ಸಮಸ್ಯೆ ಎದುರಾಗಿದೆ ಎಂದು 63% ಉದ್ಯೋಗಸ್ಥ ಮಹಿಳೆಯರು ಮತ್ತು 69% ಉದ್ಯೋಗಸ್ಥ ತಾಯಂದಿರು ಹೇಳಿದ್ದಾರೆ.







