ಚೀನಾದ ಅತ್ಯಂತ ಶ್ರೀಮಂತ ಪಟ್ಟಿಯಿಂದ ಜಾರಿದ ಜಾಕ್ ಮಾ

ಬೀಜಿಂಗ್ (ಚೀನಾ), ಮಾ. 2: ಚೀನಾದ ಅಲಿಬಾಬ ಮತ್ತು ಆ್ಯಂಟ್ ಉದ್ದಿಮೆ ಸಮೂಹಗಳ ಸ್ಥಾಪಕ ಜಾಕ್ ಮಾ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಕಳೆದುಕೊಂಡಿದ್ದಾರೆ. ಅವರ ಬೃಹತ್ ವಾಣಿಜ್ಯ ಸಾಮ್ರಾಜ್ಯವು ಚೀನಾದ ಆಡಳಿತಗಾರರ ಅವಕೃಪೆಗೆ ಒಳಗಾದ ಬಳಿಕ ಅದರ ಪ್ರಗತಿ ಕುಂಠಿತವಾಗಿದೆ. ಈ ಅವಧಿಯಲ್ಲಿ ಅದರ ಪ್ರತಿಸ್ಪರ್ಧಿ ಕಂಪೆನಿಗಳು ವಿಜೃಂಭಿಸಿವೆ.
2019 ಮತ್ತು 2020ರ ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಮಾ ಮತ್ತು ಅವರ ಕುಟುಂಬವು ಚೀನಾದ ಅತ್ಯಂತ ಶ್ರೀಮಂತ ಕುಟುಂಬವಾಗಿತ್ತು. ಆದರೆ, ನೂತನ ಪಟ್ಟಿಯಲ್ಲಿ ಈ ಕುಟುಂಬವು ನಾಲ್ಕನೇ ಸ್ಥಾನದಲ್ಲಿದೆ.
ಆ್ಯಂಟ್ ಗ್ರೂಪ್ ಮತ್ತು ಅಲಿಬಾಬ ಕಂಪೆನಿ ಏಕಸ್ವಾಮ್ಯಕ್ಕಾಗಿ ತನ್ನ ಎದುರಾಳಿ ಕಂಪೆನಿಗಳನ್ನು ಹತ್ತಿಕ್ಕುವ ಪ್ರವೃತ್ತಿಯಲ್ಲಿ ತೊಡಗಿದೆ ಎಂಬುದಾಗಿ ಆರೋಪಿಸಿ, ಅಲ್ಲಿನ ಆಡಳಿತಗಾರರು ಈ ಕಂಪೆನಿಗಳ ವಿರುದ್ಧ ದಂಡನಾ ಕ್ರಮಗಳನ್ನು ತೆಗೆದುಕೊಂಡ ಬಳಿಕ, ಜಾಕ್ ಮಾ ಅವರ ಸಂಪತ್ತಿನಲ್ಲಿ ಕುಸಿತವಾಗಿದೆ.
ಅಕ್ಟೋಬರ್ 23ರಂದು ಮಾಡಿದ ಭಾಷಣದಲ್ಲಿ ಜಾಕ್ ಮಾ ಚೀನಾದ ನಿಯಂತ್ರಣ ವ್ಯವಸ್ಥೆಯ ವಿರುದ್ಧ ಕಿಡಿಗಾರಿದ್ದರು. ಅಂದಿನಿಂದ ಅವರಿಗೆ ಸಮಸ್ಯೆಗಳು ಆರಂಭವಾಗಿವೆ. ಅವರ ಆ್ಯಂಟ್ ಗ್ರೂಪ್‌ನ 37 ಬಿಲಿಯ ಡಾಲರ್ ಮೌಲ್ಯದ ಇನಿಶಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಶೇರು ವಿನಿಮಯ ಕೇಂದ್ರದಲ್ಲಿ ನೋಂದಾವಣೆಗೊಳ್ಳಬೇಕಾಗಿದ್ದ ಕೆಲವೇ ದಿನಗಳ ಮೊದಲು ಸ್ಥಗಿತಗೊಳಿಸಲಾಗಿತ್ತು.