ಮಹಿಳೆಯರ ಸಂಘಟನೆಗೆ ಸ್ತ್ರೀ ಶಕ್ತಿ ಯೋಜನೆ ಸಹಕಾರಿ: ಕಾವೇರಿ

ಉಡುಪಿ : ಮಹಿಳೆಯರು ಕೌಶಲ್ಯ ಅಭಿವೃದ್ಧಿಯ ಮೂಲಕ ತರಬೇತಿ ಯನ್ನು ಪಡೆದು ಉನ್ನತ ಸ್ಥಾನಕ್ಕೆ ಏರಬೇಕು. ಸ್ತ್ರೀ ಯೋಜನೆಗಳು ಮಹಿಳೆಯರನ್ನು ಸಂಘಟಿಸಿಕೊಳ್ಳುವಲ್ಲಿ ಬಹಳಷ್ಟು ಸಹಕಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಕಾವೇರಿ ಹೇಳಿದ್ದಾರೆ.
ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಪಂಗಡಗಳ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ಉಡುಪಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದಾ್ಘಟಿಸಿ ಅವರು ಮಾತ ನಾಡುತಿದ್ದರು.
ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಆನ್‌ಲೈನ್ ಖರೀದಿ ಮಾಡುವುದನ್ನು ತಿಳಿದುಕೊಳ್ಳಬೇಕು. ಜಾಲ ತಾಣದಲ್ಲಿರುವ ಡಿಜಿಟಲ್ ಮಾರುಕಟ್ಟೆ ವ್ಯಾಪಕವಾಗಿ ಹರಡುತ್ತಿದ್ದು, ಮೊಬೈಲ್ ಮೂಲಕ ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ಆದಾಯ ಗಳಿಸ ಬಹುದಾಗಿದೆ. ಆನ್‌ಲೈನ್ ಮೂಲಕ ವ್ಯವಹಾರ ಮಾಡುವಾಗ ಜಾಗರೂಕತೆ ಯಿಂದ ಮಾಡಬೇಕು. ಉತ್ತಮ ಗುಣಮಟ್ಟದ ಉತ್ಪನ್ನ ಗಳನ್ನು ತಯಾರಿಸಿ, ವ್ಯವಹಾರ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ಹೆಣ್ಣು ಮನಸ್ಸು ಮಾಡಿದರೆ ಪ್ರಪಂಚದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಮಹಿಳೆಯರು ನಿಂತ ನೀರಾಗದೇ ಕೌಶಲ್ಯ ತರಬೇತಿಯಿಂದ ಹೊಸ ಹೊಸ ವಿಷಯಗಳನ್ನು ಕಲಿತು ಜೀವನದಲ್ಲಿ ತೊಡಗಿಸಿಕೊಂಡು ವಿಶೇಷ ಸಾಧನೆ ಮಾಡಬೇಕು. ಪರಿಶಿಷ್ಟ ಜಾತಿ-ಪಂಗಡದ ಮಹಿಳೆಯರು ಹಿಂಜರಿಕೆ ಯನ್ನು ಬಿಟ್ಟು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಉಡುಪಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಜಯಂತಿ, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ, ಮೇಲ್ವಿಚಾರಕಿ ಶೈಲಾ ವಂದಿಸಿದರು.







