ಬಂಟ್ವಾಳ ವಿದ್ಯುತ್ ಸಬ್ ಸ್ಟೇಷನ್: ಆಯ್ಕೆ ಮಾಡಿದವರಿಂದಲೇ ಜಾಗ ರಿಜೆಕ್ಟ್ !
ಮಂಗಳೂರು, ಮಾ. 2: ಬಂಟ್ವಾಳದ ಸಿದ್ಧಕಟ್ಟೆಯಲ್ಲಿ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕಾಗಿ 65 ಸೆಂಟ್ಸ್ ಜಾಗವನ್ನು ಕೆಪಿಟಿಸಿಎಲ್ ನಿಂದ ಆಯ್ಕೆ ಮಾಡಲಾಗಿತ್ತು. ಆದರೆ ಅದನ್ನು ಸಮತಟ್ಟು ಮಾಡಲು 8 ಕೋಟಿ ರೂ.ಗಳ ಬೇಕಾಗುತ್ತದೆ ಎಂಬ ವರದಿ ನೀಡಿ ಆಯ್ಕೆ ಮಾಡಿದವರೇ ಜಾಗವನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕಾ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜೇಶ್ ನಾಯ್ಕ ಈ ಬಗ್ಗೆ ಆಕ್ಷೇಪಿಸಿದರು.
ಜಾಗವನ್ನು ಕೈಬಿಟ್ಟ ಬಗ್ಗೆ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಗಮನಕ್ಕೆ ಈ ವಿಚಾರ ತಂದಾಗ ಆ ಜಾಗವನ್ನು ಸಮತಟ್ಟು ಮಾಡಲು 8 ಕೋಟಿ ರೂ.ಗಳ ಅಗತ್ಯವಿರುವುದರಿಂದ ರಿಜೆಕ್ಟ್ ಮಾಡಿರುವುದಾಗಿ ಆ ಜಾಗವನ್ನು ಆಯ್ಕೆ ಮಾಡಿದವರೇ ಉತ್ತರ ನೀಡಿರುತ್ತಾರೆ. ಇದು ನಂಬುವಂತಹ ಮಾತೇ ? ಎಂದು ಬಂಟ್ವಾಳ ಶಾಕ ರಾಜೇಶ್ ನಾಯ್ಕ ಪ್ರಶ್ನಿಸಿದರು. ಅಲಂಕಾರಿನಲ್ಲಿಯೂ ಸಬ್ ಸ್ಟೇಷನ್ ಕಳೆದ ಐದು ವರ್ಷಗಳಿಂದ ಆಗಿಲ್ಲ ಎಂದು ಸಂಜೀವ ಮಠಂದೂರು ಆಕ್ಷೇಪಿಸಿದರು.
ಸಭೆಯಲ್ಲಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಅನುಪಸ್ಥಿತಿ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಜಾಗ ಗುರುತಿಸುವಲ್ಲಿಯೇ ಎಡವಟ್ಟು ಮಾಡಿಕೊಂಡು ಬಳಿಕ ರಿಜೆಕ್ಟ್ ಮಾಡಿದ್ದರೆ ಅಂತಹ ತಪ್ಪಿತಸ್ಥ ಅಧಿಕಾರಿಗಳಿಗೆ ಶೋಕಾಸು ನೋಟೀಸು ನೀಡಿ ಕ್ರಮ ವಹಿಲಾಗುವುದು ಎಂದು ಎಚ್ಚರಿಸಿದರು.
5588 ಹೆ.ಅಡಿಕೆ ಬೆಳೆಗೆ ಹಳದಿ ರೋಗಬಾಧಿತ
ತೋಟಗಾರಿಕಾ ಇಲಾಖೆ ಕೈಗೊಂಡಿದ್ದ ಸಮೀಕ್ಷೆಯಲ್ಲಿ ದ.ಕನ್ನಡ ಜಿಲ್ಲೆಯಲ್ಲಿ ಸಂಪಾಜೆ, ಅರಂತೋಡು, ಅಲೆಟ್ಟಿ, ಕೊಡಿಯಾಲ, ಉಬರಡ್ಕ ಮಿತ್ತೂರು, ಮರ್ಕಂಜ , ಮಡಪ್ಪಾಡಿ, ಕೊಲ್ಲಮೊಗ್ರು, ನೆಲ್ಲೂರು ಕೆಮ್ರಾಜೆ ಹಾಗೂ ಹರಿಹರ ಪಲ್ಲತಡ್ಕ ಗ್ರಾಮಪಂಚಾಯತ್‌ಗಳಲ್ಲಿ ಒಟ್ಟು 1217.38 ಹೆ. ಅಡಿಕೆ ಬೆಳೆ ಹಳದಿ ಎಲೆ ರೋಗಕ್ಕೀಡಾಗಿದ್ದ್ದು 5588 ರೈತರು ಬಾಧಿತರಾಗಿದ್ದರೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಅವರು ವಿವರಿಸಿದರು.
ಸಮೀಕ್ಷೆಯಲ್ಲಿ ಹಳದಿ ಎಲೆ ರೋಗ ಬಾಧಿತ ಅಡಿಕೆಗೆ ಪರ್ಯಾಯವಾಗಿ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಇಚ್ಛಿಸುವ ರೈತರ ಮಾಹಿತಿಯನ್ನು ಸಹ ಪಡೆದುಕೊಳ್ಳಲಾಗಿದೆ. ಅದರಂತೆ 2092 ರೈತರು ತೆಂಗು ಬೆಳೆಗೆ ಆಸಕ್ತಿ ವಹಿಸಿದ್ದಾರೆ. ಗೇರು , ಕೋಕೋ , ತಾಳೆಬೆಳೆ ಬೆಳೆಗಳನ್ನು ಬೆಳೆಯಲು ಸಹ ರೈತರು ಆಸಕ್ತಿ ವ್ಯಕ್ತಪಡಿಸಿದ್ದು 581 ರೈತರು ಗೇರು , 1546 ರೈತರು ಕೋಕೋ, 97 ರೈತರು ತಾಳೆ ಬೆಳೆಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂದವರು ವಿವರಿಸಿದರು.
ಶಾಲಾರಂಭವಾಗಿದ್ದು, ಭರ್ತಿಯಾಗದ ಹಾಸ್ಟೇಲ್‌ಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ವಾಸತಿವ್ಯಕ್ಕೆ ಅವಕಾಶ ಒದಗಿಸುವಂತೆ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ, ಈಗ ಶಾಲಾರಂಭವಾಗಿದ್ದು ಕೆಲವು ಹಾಸ್ಟೇಲ್ ಗಳು ಖಾಲಿ ಇವೆ. ಪ್ರಸಕ್ತ 692 ವಿದ್ಯಾರ್ಥಿಗಳು ಹಾಸ್ಟೇಲ್ ವಂಚಿತರಾಗಿದ್ದಾರೆ. ಅವರಿಗೂ ಖಾಲಿ ಇರುವ ಹಾಸ್ಟೇಲ್‌ಗಳಲ್ಲಿ ವಸತಿಗೆ ಅವಕಾಶ ನೀಡಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ಕಟ್ಟಡಗಳನ್ನು ಬಾಡಿಗೆ ನೀಡುವ ವಿಚಾರದಲ್ಲಿ ಬಾಡಿಗೆದಾರರ ದಂಧೆ ನಡೆಯುತ್ತಿದೆ. ಸ್ವಂತ ಕಟ್ಟಡ ಇಲ್ಲದಿರುವ ಕಡೆಗಳಲ್ಲಿ ಬಾಡಿಗೆ ಕಟ್ಟಡಕ್ಕೆ ದುಬಾರಿ ಬಾಡಿಗೆ ಗೊತ್ತುಪಡಿಸಿ ಅದನ್ನೇ ದಂಧೆಯಾಗಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಆರೋಪಿಸಿದರು. ಈ ಕುರಿತು ಪರಾಮರ್ಶೆ ನಡೆಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿ ಬಳಿಗೆ ನಿಯೋಗ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಗೆ ಹಳದಿ ಎಲೆ ರೋಗ ಬಾಧಿತವಾಗಿರುವ ಹಿನ್ನಲೆಯಲ್ಲಿ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಹಾಗೂ ಪರ್ಯಾಯ ಬೆಳೆ ಬೆಳಸಲು ನೆರವು ನೀಡುವಂತೆ ಮುಂದಿನ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ದೇಶೀಯ ತಳಿ, ಸಾವಯವ ಕೃಷಿಗೆ ಒತ್ತು
ಜಿಲ್ಲೆಯಲ್ಲಿ ಮಲೆನಾಡು ಗಿಡ್ಡ ಮತ್ತು ಅಮೃತ್ ಮಹಲ್ ಗೋತಳಿ ಬೆಳೆಸುವಂತೆ ಶಾಸಕ ಭೋಜೇ ಗೌಡ ಒತ್ತಾಯಿಸಿದರು. ಮಳೆಗಾಲದಲ್ಲಿ ಜೌಗು ಪ್ರದೇಶದಲ್ಲಿ ಮೂರು ತಿಂಗಳ ಅವಧಿಗೆ ಮೆಕ್ಕೆ ಜೋಳ ಬೆಳೆದರೆ ಪಶು ಆಹಾರವಾಗಿ ಉಪಯೋಗಿಸಬಹುದು. ಅಲ್ಲದೆ ಸಾವಯವ ಕೃಷಿ ನಡೆಸಿದರೆ, ನೈಸರ್ಗಿಕವಾಗಿ ಎಲೆಹಳದಿ ರೋಗದಂತಹ ಯಾವುದೇ ರೋಗ ಕಾಣಿಸದು ಎಂದು ಶಾಸಕ ರಾಜೇಶ್ ನಾಯ್ಕೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಗೋಮಾಳ ಹೊರತಾಗಿ ಮೇವಿಗೆ ಕೊರತೆ ಬಾರದಂತೆ ಸ್ಟಾಕ್ ಯಾರ್ಡ್ ಮಾಡುವಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗೆ ಡಿಸಿ ಡಾ.ರಾಜೇಂದ್ರ ಸೂಚನೆ ನೀಡಿದರು.
ಟೋಲ್ ಪಾವತಿಸಬೇಕು ಎಂಬ ಕಾರಣಕ್ಕೆ ಖಾಸಗಿ ಬಸ್‌ಗಳು ತಲಪಾಡಿ ಟೋಲ್ ಗೇಟ್ ವರೆಗೆ ಮಾತ್ರ ಸಂಚರಿಸುವುದರಿಂದ ಪ್ರಯಾಣಿಕರು ಅರ್ಧದಲ್ಲೇ ಇಳಿದು ನಡೆದುಕೊಂಡು ತಲಪಾಡಿ ಬಸ್ಟೇಂಡ್ ತಲುಪಬೇಕಾಗುತತಿದೆ. ಈ ಸಮಸ್ಯೆ ನಿವಾರಿಸಲು ಬಸ್ ಮಾಲೀಕರು, ಟೋಲ್ ಸಿಬ್ಬಂದಿ ಹಾಗೂ ಸಾರಿಗೆ ಅಧಿಕಾರಿಗಳ ಜೊತೆ ಜಿಲ್ಲಾಡಳಿತ ಸಭೆ ನಡೆಸುವಂತೆ ಶಾಸಕ ಯು.ಟಿ.ಖಾದರ್ ಆಗ್ರಹಿಸಿದರು.







