ಮೀಸಲಾತಿ ಕೇಳುವವರಿಗೆ ನಾಚಿಕೆಯಾಗಬೇಕು: ಸಂಸದ ವಿ. ಶ್ರೀನಿವಾಸ್ ಪ್ರಸಾದ್
"ಹತ್ತು ಕೋಟಿ ಕೊಟ್ಟು ಹೆಲಿಕಾಪ್ಟರ್ ಕೊಂಡುಕೊಳ್ಳುವವರನ್ನು ಎಸ್ಟಿಗೆ ಸೇರಿಸಲು ಸಾಧ್ಯವೆ?"

ಮೈಸೂರು,ಮಾ.1: ಹತ್ತು ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ಕೊಂಡುಕೊಳ್ಳುವವರನ್ನು ಎಸ್ಟಿಗೆ ಸೇರಿಸಲು ಸಾಧ್ಯವೆ? ಮೀಸಲಾತಿ ಕೇಳುವ ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಕಿಡಿಕಾರಿದರು.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ನೀಡಬೇಕಿರುವುದು ಕೇಂದ್ರ ಸರ್ಕಾರ, ಎಲ್ಲೊ ಕುಳಿತು ಹೋರಾಟ ಮಾಡಿದರೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಎಸ್ಸಿ, ಎಸ್ಟಿಗೆ ಈ ಸಮುದಾಯವನ್ನು ಸೇರಿಸಬೇಕೆ ಇಲ್ಲವೆ ಎಂಬುದನ್ನು ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ರಾಜ್ಯ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ಅದು ಬಿಟ್ಟು ಬೀದಿಯಲ್ಲಿ ನಿಂತು ಶಕ್ತಿ ಪ್ರದರ್ಶನ ಮಾಡಿದರೆ ಮೀಸಲಾತಿ ಸಾಧ್ಯವಿಲ್ಲ ಎಂದು ಹರಿಹಾಯ್ದರು.
ಹತ್ತುಕೋಟಿ ಕೊಟ್ಟು ಹೆಲಿಕಾಪ್ಟರ್ ಖರೀದಿಮಾಡುವವರನ್ನು ಎಸ್ಟಿಗೆ ಸೇರಿಸಿ ಎನ್ನಲು ಆಗುತ್ತಾ? ಮೀಸಲಾತಿ ಬಗ್ಗೆ ಸ್ವಲ್ಪ ಚಿಂತನೆ ಮಾಡಬೇಕು. ಈಶ್ವರಪ್ಪ, ವಿಶ್ವನಾಥ್ ಯಾರು, ಇವರನ್ನು ಈ ಜನಾಂಗವನ್ನು ಎಸ್ಟಿಗೆ ಸೇರಿಸಬೇಕಾ? ಎಂಟಿಬಿ ನಾಗರಾಜ್ ಹತ್ತು ಕೋಟಿ ಕೊಟ್ಟು ಹೆಲಿಕಾಪ್ಟರ್ ಖರೀದಿ ಮಾಡುತ್ತಾರೆ. ಹಲವಾರು ಮಂದಿ ಉದ್ಯಮಿಗಳು, ಬಿಲ್ಡರ್ಸ್‍ಗಳು ಇದ್ದಾರೆ. ಕುರುಬರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಉಪಮುಖ್ಯಮಂತ್ರಿಗಳಾಗುತ್ತಾರೆ. ಇವರನ್ನು ಎಸ್ಟಿಗೆ ಸೇರಿಸಬೇಕಾ? ಮೀಸಲಾತಿ ಕೇಳುವ ಇವರಿಗೆ ನಾಚಿಕೆಯಾಗಬೇಕು ಎಂದು ಲೇವಡಿ ಮಾಡಿದರು.
ಇನ್ನೂ ಕಾಡು ಜನರು ಮೈ ಮೇಲೆ ಬಟ್ಟೆ ಇಲ್ಲದೆ ಕಷ್ಟ ಪಡುತ್ತಿದ್ದಾರೆ. ಇಂತವರು ಮೀಸಲಾತಿ ಕೇಳಲಿ, ರಾಜ್ಯ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿ ಕಾಡುಕುರುಬರನ್ನು ಏಕೆ ಎಸ್ಟಿಗೆ ಸೇರಿಸಬೇಕು ಎಂದು ವರದಿ ನೀಡಲಿ. ಕೇಂದ್ರ ಸರ್ಕಾರ ಪರಿಶಿಲೀಸಿ ಅವರನ್ನು ಎಸ್ಟಿಗೆ ಸೇರಿಸಿಕೊಳ್ಳಲಿ, ಇದು ನಿಮಗೆ ಸೇರುವ ವಿಷಯ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆಲವರು 2ಎಗೆ ಸೇರಿಸಿ ಎಂದು ಕೇಳುತ್ತಿದ್ದಾರೆ. ಅವರನ್ನು ಸೇರಿಸಲು ಸಾಧ್ಯವೆ, ಇನ್ನು ಕೆಲವರು ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೇಳುತ್ತಾರೆ ಅವರೆಲ್ಲರಿಗೂ ಮೀಸಲಾತಿ ನೀಡಲು ಆಗುತ್ತಾ? ಹಾಗಾಗಿ ರಾಜ್ಯ ಸರ್ಕಾರ ಸ್ಪಷ್ಟ ನಿಲವನ್ನು ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.
ಮೀಸಲಾತಿಗಾಗಿ ಹೋರಾಟ ಮಾಡುವವರಿಗೆ ರಾಜ್ಯದ ಮುಖ್ಯಮಂತ್ರಿಗಳು ಒಂದೇ ಹೇಳಿಕೆಯಲ್ಲಿ ಮುಗಿಸಬೇಕಿತ್ತು. ಇದನ್ನು ಇಷ್ಟು ದೊಡ್ಡಮಟಕ್ಕೆ ಹೋಗಲು ಬಿಡಬಾರದಿತ್ತು. ರಾಜ್ಯ ಸರ್ಕಾರ ತನ್ನ ಇತಿಮಿತಿಯೊಳಗೆ ಏನು ಮಾಡುತ್ತದೆ ಎಂಬುದನ್ನು ಹೇಳಿ ಈ ವಿಚಾರವನ್ನೇ ಮುಕ್ತಾಯಗೊಳಿಸಬೇಕಿತ್ತು ಎಂದು ಹೇಳಿದರು.







