ದಕ್ಷಿಣ ಆಫ್ರಿಕಾದ ಏಕದಿನ, ಟಿ-20 ಕ್ರಿಕೆಟ್ ನಾಯಕನಾಗಿ ಬವುಮಾ ಆಯ್ಕೆ
ಡೀನ್ ಎಲ್ಗರ್ ಗೆ ಟೆಸ್ಟ್ ಕ್ರಿಕೆಟ್ ನಾಯಕತ್ವ
ಟೆಂಬಾ ಬವುಮಾ
ಜೋಹಾನ್ಸ್ ಬರ್ಗ್ : ದಕ್ಷಿಣ ಆಫ್ರಿಕಾವು ತನ್ನ ನೂತನ ಟೆಸ್ಟ್ ನಾಯಕನನ್ನಾಗಿ ಡೀನ್ ಎಲ್ಗರ್ ಹಾಗೂ ಸೀಮಿತ ಓವರ್ ಗಳ ಕ್ರಿಕೆಟ್ ತಂಡಕ್ಕೆ ಟೆಂಬಾ ಬವುಮಾರನ್ನು ನಾಯಕನನ್ನಾಗಿ ನೇಮಕ ಮಾಡಿದೆ.
ಟೆಸ್ಟ್ ಕ್ರಿಕೆಟ್ ನ ಉಪ ನಾಯಕನಾಗಿರುವ ಬವುಮಾ ಮುಂಬರುವ 3 ವಿಶ್ವಕಪ್ ಗಳಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. 2021 ಹಾಗೂ 2022ರಲ್ಲಿ ಟ್ವೆಂಟಿ-20 ವಿಶ್ವಕಪ್ ಹಾಗೂ 2023ರಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮುಂದಿನ ಆವೃತ್ತಿಯಲ್ಲಿ ದ. ಆಫ್ರಿಕಾದ ಟೆಸ್ಟ್ ತಂಡವನ್ನು ಎಲ್ಗರ್ ನಾಯಕನಾಗಿ ಮುನ್ನಡೆಸಲಿದ್ದಾರೆ.
ಬವುಮಾ ಖಾಯಂ ನಾಯಕನಾಗಿ ನೇಮಕವಾಗಿರುವ ಕಪ್ಪು ವರ್ಣದ ಆಫ್ರಿಕನ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ಇಬ್ಬರು ನಾಯಕರು ಕ್ವಿಂಟನ್ ಡಿಕಾಕ್ ಅವರಿಂದ ನಾಯಕತ್ವವಹಿಸಿಕೊಳ್ಳಲಿದ್ದಾರೆ.
ಬವುಮಾ ಈ ತನಕ ಕೇವಲ 6 ಏಕದಿನ ಹಾಗೂ 8 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಮುಂದಿನ 3 ವಿಶ್ವಕಪ್ ಗಳಲ್ಲಿ ತಂಡವನ್ನು ಮುನ್ನಡೆಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಎಲ್ಗರ್ ದ. ಆಫ್ರಿಕಾದ ಪರ 67 ಟೆಸ್ಟ್ ಪಂದ್ಯಗಳಲ್ಲಿ 13 ಶತಕಗಳ ಸಹಿತ 4,260 ರನ್ ಗಳಿಸಿದ್ದಾರೆ. ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.